ಕವಿತೆಗಳು ಕವಿಯ ಕಲ್ಪನೆಯ ಜೊತೆಗೆ ಓದುಗನ ಊಹೆಗೆ ಅನುಗುಣವಾಗಿ ಹರಿವ ನದಿ . ಕವಿತೆ ಬರೆಯುವುದು ಒಂದು ತಪಸ್ಸಾದರೆ ಓದುವುದು ಒಂದು ಸುಖ. ಈ ನಿಟ್ಟಿನಲ್ಲಿ ಅದನ್ನು ಸೃಷ್ಟಿಸಿ ಜನರಿಗೆ ತಲುಪಿಸುವುದು ಸಾಧನೆಯೇ ಸರಿ. ಇದಕ್ಕೆ ಪೂರಕವೆಂಬಂತೆ “ಸಸಿ ಪ್ರಕಾಶನವು” ಈಗಾಗಲೇ 15 ಕ್ಕೂ ಹೆಚ್ಚು ಜನಪ್ರಿಯ ಹಾಗೂ ಯುವ ಬರಹಗಾರರಿಗೆ ವೇದಿಕೆಯೊಂದನ್ನು ಕಲ್ಪಿಸಿ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ.
ಇದೀಗ, ಕಿರುತೆರೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ, ಸಿನಿಮಾಗಳಿಗೆ ಗೀತ ರಚನೆಯನ್ನೂ ಮಾಡುತ್ತಿರುವ ರಾಘವೇಂದ್ರ ಸಿವಿ ಅವರ “ದೇವರ ಬಿಕ್ಕಳಿಕೆಗಳು” ಎಂಬ ಚೊಚ್ಚಲ ಕವನ ಸಂಕಲನವನ್ನು ಸಸಿ ಪ್ರಕಾಶನವು ಪ್ರಕಟಿಸಿದ್ದಾರೆ. ಈ ಮೂಲಕ ಸಾಹಿತ್ಯ ಲೋಕಕ್ಕೆ ಅದ್ಧೂರಿ ಸ್ವಾಗತ ನೀಡಿ ಲೇಖಕರಿಗೆ ಭರವಸೆ ಮೂಡಿಸಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಖ್ಯಾತ ಲೇಖಕ , ಕಥೆಗಾರ , ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ “ವಿಕಾಸ್ ನೇಗಿಲೋಣಿ ” ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದು ಯುವ ಕವಿಯ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಹಾಗೇ ಮದನ್ ಸಿಪಿ ಅವರ ಅದ್ಭುತವಾದ ಮುಖಪುಟ ವಿನ್ಯಾಸ ಈ ಕವನ ಸಂಕಲನದ ಮೆರುಗು ಹೆಚ್ಚಿಸಿದೆ. ಸದ್ಯ ದೇವರ ಬಿಕ್ಕಳಿಕೆಗಳ ಕವಿತೆಗಳಿಗೆ ಓದುಗರಿಂದ ಅತ್ಯುತ್ತಮವಾದ ಪ್ರಶಂಸೆ ವ್ಯಕ್ತಪಡಿಸುತ್ತಿರುವುದು ವಿಶೇಷ.
ಕನ್ನಡ ಚಿತ್ರರಂಗದ ಹಿರಿಯ ಸಾಹಿತಿ, ನಿರ್ದೇಶಕ ಡಾ.ನಾಗೇಂದ್ರ ಪ್ರಸಾದ್ ‘ದೇವರ ಬಿಕ್ಕಳಿಕೆಗಳು’ ಕವನ ಸಂಕಲನವನ್ನು ಮೆಚ್ಚಿಕೊಂಡಿದ್ದಾರೆ. ರಾಘವೇಂದ್ರ ಸಿನಿ ಅವರ ಕವಿತೆಗಳಿಗೆ ಓದಿ ನಾಗೇಂದ್ರ ಪ್ರಸಾದ್ ಅವರು ಬೆನ್ನು ತಟ್ಟಿದ್ದಾರೆ. ಅಲ್ಲದೇ ಒಂದು ಕವಿತೆಯನ್ನು ಓದಿ ಸಂಭ್ರಮಿಸಿದ್ದಾರೆ.
ಇನ್ನು, ಸಸಿ ಪ್ರಕಾಶನವು ಹರಿವು ಬುಕ್ಸ್ ಜೊತೆಗೂಡಿ ದಿನಾಂಕ 09/08/2026 ರಂದು ಆಯೋಜಿಸಿದ್ದ “ಪುಟಗಳಾಚೆಯ ಭೇಟಿ “ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಲೇಖಕಿ ಎಂ ಆರ್ ಕಮಲಾ , ಬರಹಗಾರರು , ಪ್ರಕಾಶಕರು ಆದಂತಹ ಜಿ ಎನ್ ಮೋಹನ್ ಮತ್ತು ಜನಪ್ರಿಯ ಯೂಟ್ಯೂಬ್ ಚಾನೆಲ್ ENT ಕ್ಲಿನಿಕ್ ನ ಕೀರ್ತಿ ನಾರಾಯಣ್ ಸೇರಿದಂತೆ ಅನೇಕ ಓದುಗರು ಉಪಸ್ಥಿತಿಯಲ್ಲಿ ಯುವ ಬರಹಗಾರ ರಾಘವೇಂದ್ರ ಸಿವಿ ಅವರ ಮೊದಲ ಕವನ ಸಂಕಲನ ಬಿಡುಗಡೆಗೊಂಡಿದೆ.
ಯುವ ಕವಿಯನ್ನು ನಮ್ಮ ತಂಡ ತುಂಬು ಹೃದಯದಿಂದ ಪ್ರೋತ್ಸಾಹಿಸುತಿದ್ದು ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಮತ್ತಷ್ಟು ಅಧಿಕಗೊಳ್ಳಲಿ ಎಂದು ಆಶಿಸುತ್ತದೆ .




