ಬಸ್ ಚಾಲಕನಾಗಿ ಮಿಂಚಿದ ಶೈನ್ ಶೆಟ್ಟಿ; ಟೀಸರ್ ರಿಲೀಸ್

ಬಸ್ ಚಾಲಕನಾಗಿ ಮಿಂಚಿದ ಶೈನ್ ಶೆಟ್ಟಿ

Photo Credits: @shineshettyofficial (Instagram)

ಬಿಗ್ ಬಾಸ್ ಕನ್ನಡ ವಿಜೇತ ಹಾಗೂ ಜನಪ್ರಿಯ ನಟ ಶೈನ್ ಶೆಟ್ಟಿ ನಾಯಕರಾಗಿ ಅಭಿನಯಿಸಿರುವ ‘ಶಂಕರಾಭರಣ’ ಸಿನಿಮಾದ ಆಕರ್ಷಕ ಟೀಸರ್ ಇದೀಗ ಬಿಡುಗಡೆಯಾಗಿದೆ. ವಿಭಿನ್ನ ಹಾಗೂ ನವೀನ ಪ್ರಯತ್ನದ ಮೂಲಕ ಮೂಡಿಬಂದಿರುವ ಈ ಟೀಸರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಶಂಕರಾಭರಣ ಹೆಸರಿನ ಬಸ್ ಪೋಸ್ಟರ್ ಮೂಲಕವೇ ಚಿತ್ರಪ್ರೇಮಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದ ಈ ಚಿತ್ರದ ಟೀಸರ್, ಇದೀಗ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

ಈ ಸಿನಿಮಾದಲ್ಲಿ ನಟ ಶೈನ್ ಶೆಟ್ಟಿ ಅವರು ಶಂಕರಾಭರಣ ಬಸ್‌ನ ಚಾಲಕನಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಸ್ ಚಾಲಕನಾಗಿ ಅವರ ಅಭಿನಯ ಮತ್ತು ಲುಕ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

Photo Credits: @shineshettyofficial (Instagram)

ಸುಮಂತ್ ಭಟ್ ನಿರ್ದೇಶನ: ಹಾರರ್ ಕಾಮಿಡಿ ಕಥಾಹಂದರ

ಏಕಂ ವೆಬ್ ಸಿರೀಸ್ ಹಾಗೂ ಮಿಥ್ಯ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸುಮಂತ್ ಭಟ್, ಈ ಚಿತ್ರದ ಮೂಲಕ ಮೊದಲ ಬಾರಿಗೆ ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಇದೊಂದು ಅದ್ಭುತ ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಶಂಕರಾಭರಣ ಬಸ್ ಪ್ರಮುಖ ಪಾತ್ರ ವಹಿಸಿದೆ. ನಾಯಕ ಮತ್ತು ನಾಯಕಿಯಷ್ಟೇ ಪ್ರಾಮುಖ್ಯತೆ ಈ ಬಸ್‌ಗೆ ನೀಡಲಾಗಿದೆ.

ಶೈನ್ ಶೆಟ್ಟಿ ಅವರು ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಸ್ವಂತ ಜೀವನದ ಅನುಭವಗಳನ್ನು ಆಧರಿಸಿ ಈ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದಾರೆ. ನಿರ್ದೇಶಕ ಸುಮಂತ್ ಭಟ್ ಆ ಕಥೆಗೆ ಸುಂದರ ದೃಶ್ಯರೂಪ ನೀಡಿದ್ದಾರೆ.

ನಿರ್ಮಾಪಕನಾಗಿ ಶೈನ್ ಎಂಟ್ರಿ: ನಾಯಕಿ ತನ್ವಿ ರಾವ್

ಶೈನ್ ಶೆಟ್ಟಿ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ರಂಗಸ್ಥಳ ಸ್ಟುಡಿಯೋ’ ಬ್ಯಾನರ್‌ನಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಕೃತಿ ಹಾಗೂ ಚರಣ್ ರಾಜ್ ಅವರ ಸಂಗೀತ ನಿರ್ದೇಶನ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಕರಾವಳಿ ಮೂಲದ ನೂತನ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ರಂಗಸ್ಥಳ ಸ್ಟುಡಿಯೋ, ಶಂಕರಾಭರಣ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ಮೊದಲ ಹೆಜ್ಜೆ ಇಟ್ಟಿದೆ.