ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರೂಪಗೊಂಡು ಕೆಲವೇ ತಿಂಗಳುಗಳಲ್ಲಿ ತೀವ್ರವಾದ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬಾಗವಾಗಿದೆ. ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಮುಖ ನಾಯಕ ಮನೀಷ್ ಬ್ರಹ್ಮಭಟ್ ಅವರು ಮೂಲ ಪಕ್ಷದ ವಿರುದ್ಧ ಬಂಡಾಯ ಎದ್ದು, ತಮ್ಮದೇ ಆದ ‘ಕಾಕ್ರೋಚ್ ಜನತಾ ಪಾರ್ಟಿ ಡೆಮಾಕ್ರಟಿಕ್’ (ಸಿಜೆಪಿ-ಡಿ) ಎಂಬ ಹೊಸ ಬಣವನ್ನು ರಚಿಸಿಕೊಂಡಿದ್ದಾರೆ. ಈ ದಿಢೀರ್ ಬೆಳವಣಿಗೆಯ ಹಿಂದೆ ಆಮ್ ಆದ್ಮಿ ಪಾರ್ಟಿಯ ಸಂಸ್ಥಾಪಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಸ್ತಕ್ಷೇಪವಿದೆ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿವೆ.
ಸಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕ ಅಭಿಜಿತ್ ದೀಪ್ಕೆ ಅವರ ವಿರುದ್ಧ ಮನೀಷ್ ಬ್ರಹ್ಮಭಟ್ ಗಂಭೀರ ಸ್ವರೂಪದ ಆರೋಪಗಳನ್ನು ಹೊರಿಸಿದ್ದಾರೆ. ಸಾರ್ವಜನಿಕರ ಶ್ರಮ ಹಾಗೂ ಬೆವರಿನಿಂದ ಕಟ್ಟಲ್ಪಟ್ಟ ಯುವ ಚಳುವಳಿಯನ್ನು ದೀಪ್ಕೆ ಅವರು ಅರವಿಂದ್ ಕೇಜ್ರಿವಾಲ್ ಅವರ ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ “ಟೀಮ್ ಕೇಜ್ರಿವಾಲ್” ರೀತಿಯಲ್ಲಿ ಬಳಕೆಯಾಗುವಂತೆ ಮಾರ್ಪಡಿಸಿದ್ದಾರೆ ಎಂದು ಅವರು ತೀವ್ರ ತೃಪ್ತಿ ವ್ಯಕ್ತಪಡಿಸಿದ್ದಾರೆ. ಮೂಲ ಪಕ್ಷದಲ್ಲಿದ್ದ ನಾಯಕರು ಕೇವಲ ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ) ಗುರಿಯಾಗಿಸಿಕೊಂಡು ವಿರೋಧಿಸುವುದರಲ್ಲೇ ನಿರತರಾಗಿದ್ದಾರೆ ಹೊರತು, ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನೇತೃತ್ವದ ನೂತನ ಸಿಜೆಪಿ-ಡಿ ಬಣ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಂಪೂರ್ಣ ಪಾರದರ್ಶಕತೆಯ ತತ್ವಗಳ ಆಧಾರದ ಮೇಲೆ ಮುನ್ನಡೆಯಲಿದೆ ಎಂದು ಬ್ರಹ್ಮಭಟ್ ತಿಳಿಸಿದ್ದಾರೆ. ಹೊಸ ಬಣಕ್ಕೆ ಯುವಜನರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳು ಮತ್ತು ಮಿಸ್ಡ್ ಕಾಲ್ ಸೌಲಭ್ಯದ ಮೂಲಕ ಸದಸ್ಯತ್ವ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಆಹ್ವಾನ ನೀಡಿದ್ದಾರೆ. ಈ ನಡುವೆ, ಪಕ್ಷದೊಳಗಿನ ತೀವ್ರ ಆಂತರಿಕ ಕಲಹ ಹಾಗೂ ಕೇಜ್ರಿವಾಲ್ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಅಭಿಜಿತ್ ದೀಪ್ಕೆ ಅಥವಾ ಆಮ್ ಆದ್ಮಿ ಪಾರ್ಟಿಯ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭಿಸಿಲ್ಲ.




