Photo Credits: @colorskannadaofficial (Instagram)
ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮತ್ತೊಂದು ರೋಮಾಂಚಕ ಪ್ರೋಮೋ ಬಿಡುಗಡೆಯಾಗಿದೆ. ಕಾರ್ಯಕ್ರಮದ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಮಾನದ ಪೈಲಟ್ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ವಿಮಾನದಿಂದ ಇಳಿದು ಗ್ರ್ಯಾಂಡ್ ಟೇಕ್ ಆಫ್ ವೇದಿಕೆಗೆ ಆಗಮಿಸುವ ಸುದೀಪ್, ಬಿಗ್ ಬಾಸ್ ಪ್ರಯಾಣಿಕರನ್ನು ಹಾಗೂ ಪ್ರೇಕ್ಷಕರನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಸ್ವಾಗತಿಸಿದ್ದಾರೆ.
“ಒಳ್ಳೆ ಕಾರ್ಯಕ್ಕೆ, ಒಳ್ಳೆ ಜಾಗಕ್ಕೆ ಕಾಲಿಡಬೇಕಾದ್ರೆ ಲೆಫ್ಟ್ ಬೇಕಾದ್ರೂ ಇಡಬಹುದು, ರೈಟ್ ಬೇಕಾದ್ರೂ ಇಡಬಹುದು” ಎಂಬ ಮಾಸ್ ಸಂಭಾಷಣೆ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.
‘ಬಿಗ್ ಬಾಸ್ ಒಂದು ಪ್ರಪಂಚ’: ಜಾಗತಿಕ ವಿಸ್ಮಯಗಳ ಥೀಮ್
ಈ ಬಾರಿಯ ಬಿಗ್ ಬಾಸ್ ಮನೆ ಸಂಪೂರ್ಣವಾಗಿ ವಿಭಿನ್ನ ಹಾಗೂ ಅದ್ಧೂರಿಯಾಗಿ ರೂಪುಗೊಂಡಿದ್ದು, ಜಾಗತಿಕ ಪ್ರಸಿದ್ಧ ತಾಣಗಳ ಥೀಮ್ ಹೊಂದಿರುವ ಸುಳಿವನ್ನು ಪ್ರೋಮೋದಲ್ಲಿ ನೀಡಲಾಗಿದೆ.
“ಬಿಗ್ ಬಾಸ್ ಒಂದು ಪ್ರಪಂಚ, ಅದರೊಳಗಡೆ ಇಷ್ಟೊಂದು ಪ್ರಪಂಚ” ಎಂದು ಸುದೀಪ್ ಅವರು ಮನೆಯ ಪ್ರಮುಖ ಆಕರ್ಷಣೆಗಳನ್ನು ಪರಿಚಯಿಸಿದ್ದಾರೆ.
ಲಂಡನ್ ಬ್ರಿಡ್ಜ್, ಚೀನಾದ ಡ್ರಾಗನ್, ಅಮೆರಿಕದ ಸ್ಟ್ಯಾಚ್ಯೂ ಆಫ್ ಲಿಬರ್ಟಿ, ವೆನಿಸ್ನ ಗಂಡೋಲ ಹಾಗೂ ಪ್ಯಾರಿಸ್ನ ಈಫಿಲ್ ಟವರ್ ವಿನ್ಯಾಸಗಳು ಬಿಗ್ ಬಾಸ್ ಮನೆಯ ಹೊಸ ಮೆರುಗನ್ನು ಅನಾವರಣಗೊಳಿಸಿವೆ.

Photo Credits: @colorskannadaofficial (Instagram)
ನಾಳೆ ಸಂಜೆ 7ಕ್ಕೆ ಅದ್ಧೂರಿ ‘ಗ್ರ್ಯಾಂಡ್ ಟೇಕ್ ಆಫ್’
ವಿಶ್ವದ ಪ್ರಮುಖ ವಿಸ್ಮಯಗಳ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಮನೆ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬ ನೀಡಲಿದ್ದು, ಹೊಸ ಆವೃತ್ತಿಯ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಸುದೀಪ್ ಅವರು ಎಲ್ಲ ಕನ್ನಡ ಪ್ರೇಕ್ಷಕರಿಗೆ “ಹ್ಯಾಪಿ ಜರ್ನಿ” ಎಂದು ಶುಭ ಹಾರೈಸಿದ್ದು, ಬಿಗ್ ಬಾಸ್ ಪ್ರಯಾಣ ಅಧಿಕೃತವಾಗಿ ಆರಂಭವಾಗಲು ಕ್ಷಣಗಣನೆ ಶುರುವಾಗಿದೆ.
ಈ ಬಹುನಿರೀಕ್ಷಿತ ‘ಗ್ರ್ಯಾಂಡ್ ಟೇಕ್ ಆಫ್’ ಕಾರ್ಯಕ್ರಮವು ನಾಳೆ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ.




