Photo Credits: @naandinirahulnaripella (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಈ ಸಂಭ್ರಮದ ವಾತಾವರಣದ ನಡುವೆಯೇ ನಟ ಯಶ್ ತಮ್ಮ ಪ್ರೀತಿಯ ತಂಗಿ ನಂದಿನಿ ಅವರಿಂದ ರಕ್ಷಾ ಬಂಧನದ ಹಬ್ಬದ ವಿಶೇಷ ಕಾಣಿಕೆ ಸ್ವೀಕರಿಸಿದ್ದಾರೆ.
ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಹಾಗೂ ಸ್ಟಾರ್‌ಡಮ್ ಸಿಕ್ಕರೂ ಯಶ್ ಅವರಿಗೆ ತಮ್ಮ ಕುಟುಂಬವೇ ಮೊದಲ ಆದ್ಯತೆ. ಅದರಲ್ಲೂ ತಂಗಿ ನಂದಿನಿ ಎಂದರೆ ಯಶ್‌ಗೆ ಎಲ್ಲಿಲ್ಲದ ಪ್ರೀತಿ.
ಯಶ್ ಎಷ್ಟೇ ಬ್ಯುಸಿಯಾಗಿದ್ದರೂ ಪ್ರತಿ ವರ್ಷವೂ ತಂಗಿ ನಂದಿನಿ ಅಣ್ಣನಿಗೆ ರಾಖಿ ಕಟ್ಟುವುದನ್ನು ಎಂದಿಗೂ ಮಿಸ್ ಮಾಡುವುದಿಲ್ಲ.
ಅಣ್ಣನ ನಿವಾಸಕ್ಕೆ ತೆರಳಿ ಸಿಹಿ ತಿನ್ನಿಸಿದ ಪ್ರೀತಿಯ ತಂಗಿ
ಈ ಬಾರಿಯೂ ವಾಡಿಕೆಯಂತೆ ಪ್ರೀತಿಯಿಂದ ಯಶ್ ಅವರ ನಿವಾಸಕ್ಕೆ ನಂದಿನಿ ತೆರಳಿದ್ದರು. ಅಣ್ಣನ ಕೈಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಯಶ್ ಕೂಡ ಅತ್ಯಂತ ಪ್ರೀತಿಯಿಂದ ತಂಗಿಯನ್ನು ಹಾರೈಸಿದ್ದು, ಈ ಸುಂದರ ಹಾಗೂ ಭಾವನಾತ್ಮಕ ಕ್ಷಣಕ್ಕೆ ರಾಧಿಕಾ ಪಂಡಿತ್ ಕೂಡ ಸಾಥ್ ನೀಡಿದ್ದಾರೆ. ಈ ರಕ್ಷಾ ಬಂಧನ ಆಚರಣೆಯ ಕ್ಯೂಟ್ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನನ್ನ ಫೇವರಿಟ್ ವ್ಯಕ್ತಿ ಎಂದಿದ್ದ ರಾಕಿಂಗ್ ಸ್ಟಾರ್
ಇತ್ತೀಚೆಗೆ ‘ಆಪ್ ಕೀ ಅದಾಲತ್’ ಶೋನಲ್ಲಿ ತಮ್ಮ ತಂಗಿ ನಂದಿನಿ ಬಗ್ಗೆ ಯಶ್ ಆಡಿದ ಮಾತುಗಳು ಸಖತ್ ವೈರಲ್ ಆಗಿದ್ದವು. “ಇಡೀ ಪ್ರಪಂಚದಲ್ಲೇ ನನಗೆ ತಂಗಿ ನಂದಿನಿ ಅತ್ಯಂತ ಫೇವರಿಟ್ ವ್ಯಕ್ತಿ” ಎಂದು ಹೇಳಿಕೊಂಡಿದ್ದರು.
‘ಕೆಜಿಎಫ್’ ಸರಣಿಯ ಬ್ಲಾಕ್‌ಬಸ್ಟರ್ ಹಿಟ್ ಸಮಯದಲ್ಲೂ ಯಶ್ ತಮ್ಮ ತಂಗಿಯೊಂದಿಗೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಇದೀಗ ‘ಟಾಕ್ಸಿಕ್’ ಸಿನಿಮಾದ ಗೆಲುವಿನ ಸಂಭ್ರಮದಲ್ಲೂ ಅದೇ ಬಾಂಧವ್ಯವನ್ನು ಮುಂದುವರಿಸಿದ್ದಾರೆ.

Photo Credits: @naandinirahulnaripella (Instagram)
‘ಎಂದೆಂದಿಗೂ ನಿನ್ನ ಸಹೋದರಿ’ ಎಂದು ತಂಗಿಯ ಭಾವುಕ ಪೋಸ್ಟ್
ಅಣ್ಣನ ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಂದಿನಿ, “ಕೆಲವು ಸಂಬಂಧಗಳು ಕೇವಲ ರಕ್ತಸಂಬಂಧದಿಂದ ಮಾತ್ರ ರೂಪುಗೊಳ್ಳುವುದಿಲ್ಲ. ಅವು ಜೀವಮಾನದ ನೆನಪುಗಳು ಮತ್ತು ಪ್ರೀತಿಯಿಂದ ಗಟ್ಟಿಗೊಳ್ಳುತ್ತವೆ” ಎಂದು ಬರೆದುಕೊಂಡಿದ್ದಾರೆ.
ಯಾವಾಗಲೂ ನಿನಗೆ ಬೆಂಬಲವಾಗಿ ನಿಲ್ಲುವ ಸಹೋದರಿ ಸದಾ ಇರುತ್ತಾಳೆ ಎಂದು ನಂದಿನಿ ಭಾವುಕರಾಗಿ ಶೀರ್ಷಿಕೆ ನೀಡಿದ್ದಾರೆ. ಈ ಮುದ್ದಾದ ಅಣ್ಣ-ತಂಗಿಯ ಬಾಂಧವ್ಯಕ್ಕೆ ಅಭಿಮಾನಿಗಳು ಮನಸೋತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.




