‘ಕನ್ನಡ ಚಿತ್ರರಂಗವನ್ನು ಬೆಳೆಯುತ್ತಿಲ್ಲ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ, ಪರ ಭಾಷೆ ಸಿನಿಮಾ ಹಾವಳಿ ಹೆಚ್ಚಾಗಿದೆ’ ಚಿತ್ರರಂಗದವರು (Sandalwood) ಮಾಧ್ಯಮಗಳ ಮೈಕ್ ಮುಂದೆ ಹೇಳುವ ಕಾಮನ್ ಡೈಲಾಗುಗಳು ಇವು. ಕನ್ನಡ ಸಿನಿಮಾಗಳು ಅಷ್ಟೇನು ಉತ್ತಮವಾಗಿ ಪ್ರದರ್ಶನ ಕಾಣುತ್ತಿಲ್ಲ ಅದಕ್ಕೆ ಕಳಪೆ ಕಂಟೆಂಟ್, ದುಬಾರಿ ಟಿಕೆಟ್ ಬೆಲೆ ಸೇರಿ ಅನೇಕ ಕಾರಣಗಳಿವೆ. ಆದರೆ ಅಪರೂಪಕ್ಕೊಂದು ಒಳ್ಳೆ ಸಿನಿಮಾ ಬಂದು, ಅದು ಒಳ್ಳೆ ಪ್ರದರ್ಶನ ನೀಡುತ್ತಿರುವಾಗ ನಮ್ಮ ಚಿತ್ರರಂಗದವರು ಮಾಡುತ್ತಿರುವುದೇನು? ತಮ್ಮ ಸಿನಿಮಾ ರಿಲೀಸ್ ಆಗುವಾಗ ‘ಬೆಂಬಲಿಸಿ, ಸಪೋರ್ಟ್ ಮಾಡಿ’ ಎಂದು ರೋಧಿಸುವ ಈ ಸಿನಿಮಾ ಮಂದಿ ಈಗ ನಿಜಕ್ಕೂ ಒಳ್ಳೆ ಸಿನಿಮಾ ಒಂದಕ್ಕೆ ಬೆಂಬಲದ ಅಗತ್ಯವಿರುವಾಗ ಎಲ್ಲಿ ಹೋಗಿದ್ದರು?
ಪ್ರೇಮದ ಊರಲಿ
‘ಪ್ರೇಮದ ಊರಲಿ’ ಎಂಬ ಸಣ್ಣ ಬಜೆಟ್ನ ಸರಳ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಶೋಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸಾಗುತ್ತಿದೆ. ಪ್ಯಾನ್ ಇಂಡಿಯಾ ರೀಚ್ ಅನ್ನು ಸಹ ಪಡೆದುಕೊಳ್ಳುತ್ತಿದೆ. ಇಷ್ಟೆಲ್ಲ ಆಗಿರುವುದು ಸಿನಿಮಾದ ಸ್ವಂತ ಶಕ್ತಿಯಿಂದ ಹಾಗೂ ಪ್ರೇಕ್ಷಕರ ನಿಸ್ವಾರ್ಥ ಬೆಂಬಲದಿಂದ. ಆದರೆ ಈ ಸಿನಿಮಾದ ಸಾಧನೆಗೆ ಚಿತ್ರರಂಗದ ಕೊಡುಗೆ ಶೂನ್ಯ. ಈ ವರೆಗೆ ಒಬ್ಬನೇ ಒಬ್ಬ ಕನ್ನಡದ ಸ್ಟಾರ್ ನಟ ಆಗಲಿ, ನಟಿ ಆಗಲಿ ‘ಪ್ರೇಮದ ಊರಲಿ’ ಸಿನಿಮಾದ ಬಗ್ಗೆ ಒಂದೇ ಒಂದು ಒಳ್ಳೆಯ ಮಾತು ಹಂಚಿಕೊಂಡಿಲ್ಲ. ಒಳ್ಳೆಯ ಸಿನಿಮಾಕ್ಕೆ ಚಿತ್ರರಂಗದವರೇ ಬೆಂಬಲಿಸದಿರುವಾಗ, ಅವರ ಕೆಟ್ಟ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಕೇಳುವುದೇಕೆ?
ತೆಲುಗು ಚಿತ್ರರಂಗದ ಒಗ್ಗಟ್ಟು
ನೆರೆಯ ತೆಲುಗು ಚಿತ್ರರಂಗದಲ್ಲಿ ಪರಿಸ್ಥಿತಿ ಹೀಗಿಲ್ಲ. ಕನ್ನಡದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುಂಚಿತವಾಗಿ ತೆಲುಗಿನ ‘ಇರುಮುಡಿ’ ಸಿನಿಮಾ ರಿಲೀಸ್ ಆಯ್ತು. ಮೊದಲೆರಡು ಶೋಗಳ ಬಳಿಕ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯ ಹಬ್ಬಿತು. ಸಂಜೆ ಮತ್ತು ರಾತ್ರಿಯ ಶೋಗಳು ಹೌಸ್ಫುಲ್ ಆದವು. ತೆಲುಗು ಸಿನಿಮಾ ತಾರೆಯರಿಗೆ ಅಷ್ಟೇ ಸಾಕಾಯ್ತು, ಮಾರನೇಯ ದಿನವೇ, ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ಜೂ ಎನ್ಟಿಆರ್, ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಇನ್ನೂ ಹಲವಾರು ತಾರೆಯರು ಸಿನಿಮಾದ ಬಗ್ಗೆ ಯೋಜಿತವಾಗಿ ಟ್ವೀಟ್ ಮಾಡಿದರು. ‘ಇರುಮುಡಿ’ ಸಿನಿಮಾದ ಟ್ರೆಂಡ್, ‘ಟಾಕ್ಸಿಕ್’ ಎದುರು ತುಸುವೂ ತಗ್ಗದಂತೆ ನೋಡಿಕೊಂಡರು. ಮಾತ್ರವಲ್ಲದೆ ‘ಟಾಕ್ಸಿಕ್’ ಸಿನಿಮಾದ ವಿರುದ್ಧ ವ್ಯವಸ್ಥಿತವಾಗಿ ನೆಗೆಟಿವ್ ನರೇಷನ್ ಅನ್ನು ಸಹ ತೆಲುಗು ರಾಜ್ಯಗಳಲ್ಲಿ ಕಟ್ಟಲಾಯ್ತು. ಪ್ರತಿಫಲವಾಗಿ ತೆಲುಗು ರಾಜ್ಯಗಳಲ್ಲಿ ‘ಟಾಕ್ಸಿಕ್’ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣಲೇ ಇಲ್ಲ.
ಇದನ್ನೂ ಓದಿ: Premada Oorali: ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ
‘ಇರುಮುಡಿ’ ಮಾತ್ರವೇ ಅಲ್ಲ ಇದಕ್ಕೆ ಮುಂಚೆ ಹಲವಾರು ಸಣ್ಣ ಪುಟ್ಟ ತೆಲುಗು ಸಿನಿಮಾಗಳಿಗೆ ಅಲ್ಲಿನ ದೊಡ್ಡ ನಟರು ಬೆಂಬಲ ನೀಡಿದ ಹಲವಾರು ಉದಾಹರಣೆ ಇದೆ. ‘ಬಲಗಂ’ ಎಂಬ ಸಣ್ಣ ಸಿನಿಮಾಕ್ಕೆ ಖುದ್ದು ಮೆಗಾಸ್ಟಾರ್ ಚಿರಂಜೀವಿ ಬೆಂಬಲ ನೀಡಿ ಸಿನಿಮಾ ಹಿಟ್ ಆಗಲು ನೆರವಾದರು. ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದ ಹುಡುಗರು ಸೇರಿ ಮಾಡಿದ ಸಿನಿಮಾಕ್ಕೆ ವಿಜಯ್ ದೇವರಕೊಂಡ ಬೆಂಬಲ ನೀಡಿ ಹಿಟ್ ಸೂಪರ್ ಹಿಟ್ ಮಾಡಿದರು. ಇಂಥಹಾ ಹಲವಾರು ಉದಾಹರಣೆಗಳು ತೆಲುಗಿನಲ್ಲಿ ಸಿಗುತ್ತವೆ. ಆದರೆ ಕನ್ನಡದಲ್ಲಿ ಇದಕ್ಕೆ ತದ್ವಿರುದ್ಧ ಕಾರ್ಯ ನಡೆಯುತ್ತದೆ.
‘ಪ್ರೇಮದ ಊರಲಿ’ ಸಿನಿಮಾಕ್ಕೆ ಮೊದಲ ವಾರಾಂತ್ಯದ ವೇಳೆಗೆಲ್ಲ ಸಣ್ಣ ಮಟ್ಟಿಗಿನ ಜನಪ್ರಚಾರ ದೊರೆತಿತ್ತು, ಸಿನಿಮಾ ಅನ್ನು ರಾಜ್ಯದಾದ್ಯಂತ ರೀಚ್ ಮಾಡಿಸಲು ಆ ಸಮಯದಲ್ಲಿ ಅವರಿಗೆ ಸ್ಟಾರ್ಗಳ ಬೆಂಬಲ ಅಗತ್ಯವಿತ್ತು. ಆದರೆ ಯಾವೊಬ್ಬರೂ ಬೆಂಬಲಕ್ಕೆ ಬರಲಿಲ್ಲ, ಬಹುಷಃ ಹಣದ ಥೈಲಿ ತಲುಪಿರಲಿಲ್ಲ ಅನಿಸುತ್ತದೆ. ಈಗ ಸಿನಿಮಾ ಬಹುತೇಕ ಸೂಪರ್ ಹಿಟ್ ಆಗಿದೆ. ಈಗಲೂ ಕನಿಷ್ಟ ಕರ್ಟಸಿಗಾದರೂ ಸಹ ಯಾರೂ ಸಿನಿಮಾ ಬಗ್ಗೆ ಮಾತನಾಡಿದ್ದು ಕಾಣುತ್ತಿಲ್ಲ. ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಕೆ ಮಾಡಿದ್ದಾರೆ. ಇದೇನಾ ಕನ್ನಡ ಚಿತ್ರರಂಗದ ಒಗ್ಗಟ್ಟು, ಒಳ್ಳೆ ಸಿನಿಮಾಗಳಿಗೆ ಕೊಡುವ ಬೆಂಬಲ ಎಂದು ಪ್ರಶ್ನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದವರಿಗೆ ಎಂದಿಗೆ ಬುದ್ಧಿ ಬರುತ್ತದೆಯೋ ಕಾದು ನೋಡಬೇಕಿದೆ.




