☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

RAHUL GANDHI : ಸುಪ್ರೀಂ ನೋಟಿಸ್ ಬೆನ್ನಲ್ಲೇ ಸಿಇಸಿ ಜ್ಞಾನೇಶ್ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ

ನವದೆಹಲಿ: ಪ್ರಜಾಪ್ರಭುತ್ವದ ಮೇಲೆ ಕ್ರಿಮಿನಲ್ ದಾಳಿ ನಡೆಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈ ದಾಳಿಯಲ್ಲಿ ಭಾಗಿಯಾಗಿರುವ ಸಿಇಸಿ ಸೇರಿದಂತೆ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗದ ಮುಖ್ಯಸ್ಥರು ಫಾರ್ಮ್ 6 ನಮೂನೆಯನ್ನು ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ಬದಲಾಯಿಸಿದ್ದಾರೆ ಎಂಬುದು ಈಗ ಸಾಬೀತಾದ ಸತ್ಯ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಬರೆದಿರುವ ಅವರು, ಇದು ಬಿಜೆಪಿಗೆ ನೆರವಾಗಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರಕ್ಕೆ “ಸುಪ್ರೀಂ” ನೋಟೀಸ್!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ಒಂದು ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಿದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಅನುಮೋದನೆ ಪಡೆಯದೆ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ತ್ರಿಸದಸ್ಯ ಪೀಠ ಈ ನೋಟಿಸ್ ಜಾರಿ ಮಾಡಿದೆ.

ಈ ಅರ್ಜಿ ವಿಚಾರಣೆ ಮುಗಿಯುವವರೆಗೆ ಸಿಇಸಿ ಆಗಿ ಕಾರ್ಯನಿರ್ವಹಿಸದಂತೆ ನಿರ್ದೇಶನ ನೀಡಬೇಕು, ಈ ಅವಧಿಯಲ್ಲಿ ಇಬ್ಬರು ಆಯುಕ್ತರ ಸರ್ವಾನುಮತದ ನಿರ್ಧಾರದಂತೆ ಆಯೋಗದ ಕೆಲಸ ನಡೆಯಬೇಕು ಮತ್ತು ಖಾಲಿಯಾಗುವ ಹುದ್ದೆಗೆ ಮುಖ್ಯ ನ್ಯಾಯಮೂರ್ತಿ ಇರುವ ಸಮಿತಿಯ ಶಿಫಾರಸಿನ ಮೇರೆಗೆ ನೇಮಕ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಸೆಪ್ಟೆಂಬರ್ 25ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎಸ್‌ಐಆರ್ ವಿಚಾರದಲ್ಲಿ ಆಯೋಗದೊಳಗೆ ಭಿನ್ನಮತವಿದೆ ಎಂದು ವರದಿ ಮಾಡಿತ್ತು. ಆಯೋಗವು ಸ್ಪಷ್ಟನೆ ನೀಡಿದ್ದರೂ ವಿವಾದ ತಣ್ಣಗಾಗಿಲ್ಲ ಮತ್ತು ಬಿಜೆಪಿಯು ಪ್ರಜಾಪ್ರಭುತ್ವವನ್ನು ಗುರಿಯಾಗಿಸಲು ಆಯೋಗವನ್ನು ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಲೇ ಇವೆ.

ಇದನ್ನೂ ಓದಿ :ಟಿಎಂಸಿ ತೊರೆದವರಿಗೆ ಮಮತಾ ಡೆಡ್ ಲೈನ್ , 15 ದಿನದಲ್ಲಿ ವಾಪಸ್ ಬಂದ್ರೆ ಅವಕಾಶ !

ಫಾರ್ಮ್ 6 ಹೊಸ ಮತದಾರರನ್ನು ಸೇರ್ಪಡೆ ಮಾಡುವ ಅತ್ಯಂತ ಮಹತ್ವದ ನಮೂನೆಯಾಗಿದ್ದು, ಅದನ್ನು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಬದಲಾಯಿಸಲಾಗಿದೆ ಎಂಬ ಆರೋಪ ಆಯೋಗದ ಕಾರ್ಯವೈಖರಿಯ ಮೇಲೆಯೇ ಗಂಭೀರ ಅನುಮಾನ ಮೂಡಿಸುತ್ತದೆ. ಭಾರತದ ಚುನಾವಣಾ ಆಯೋಗ ಸಂವಿಧಾನದ ಪ್ರಕಾರ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಮುಖ್ಯ ಚುನಾವಣಾ ಆಯುಕ್ತರೊಬ್ಬರೇ ನಿರ್ಧಾರ ಕೈಗೊಳ್ಳುವಂತಿಲ್ಲ. ಇಬ್ಬರು ಆಯುಕ್ತರ ಒಪ್ಪಿಗೆ ಪಡೆಯದೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಅರ್ಜಿ ಆಂತರಿಕ ಭಿನ್ನಮತದ ಸೂಚನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಆಯೋಗದ ನಿಷ್ಪಕ್ಷಪಾತದ ಬಗ್ಗೆ ವಿರೋಧ ಪಕ್ಷಗಳು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿವೆ. ಸುಪ್ರೀಂ ಕೋರ್ಟ್ ಈಗ ನೋಟಿಸ್ ಜಾರಿ ಮಾಡಿ ಕೇಂದ್ರ ಮತ್ತು ಆಯೋಗದಿಂದ ಉತ್ತರ ಕೇಳಿರುವುದು ನ್ಯಾಯಾಂಗದ ಮೇಲ್ವಿಚಾರಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅರ್ಜಿಯಲ್ಲಿ ಸಿಇಸಿ ಕಾರ್ಯನಿರ್ವಹಣೆಗೆ ತಡೆ ಮತ್ತು ನೇಮಕಾತಿಗೆ ಮುಖ್ಯ ನ್ಯಾಯಮೂರ್ತಿ ಇರುವ ಸಮಿತಿಯ ಶಿಫಾರಸು ಕೇಳಿರುವುದು ಚುನಾವಣಾ ಸುಧಾರಣೆಯ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.