ಶಿವಮೊಗ್ಗ: ಜಿಲ್ಲಾ ದಸರಾ (Dasara) ಸಂಭ್ರಮದಲ್ಲಿ ಅವಘಡ ನಡೆದಿದೆ. ಕಳೆದ ಕೆಲ ದಿನಗಳಿಂದ ಅದ್ಧೂರಿಯಾಗಿ, ಶಾಂತವಾಗಿ ನಡೆದಿದ್ದ ದಸರಾ ಸಮಾರಂಭ ಕೊನೆಯ ದಿನ ಅಚಾತುರ್ಯ ಘಟಿಸಿದೆ. ಪ್ರತಿ ವರ್ಷ ಅಂಬಾರಿ ಹೊರುತ್ತಿದ್ದ ಆನೆಯನ್ನು ಬದಲಾಯಿಸಿ ಅರಣ್ಯ ಇಲಾಖೆ ಕೊನೆಯ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಕೈಕೊಟ್ಟಿದೆ. ಜನರನ್ನು ನೋಡಿದ ಹೊಸ ಆನೆ ಹೆದರಿದೆ, ಇದರಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ.
ಕಳೆದ ಆರು ವರ್ಷಗಳಿಂದ ಶಿವಮೊಗ್ಗ ದಸರಾನಲ್ಲಿ ಅಂಬಾರಿಯನ್ನು ಸಾಗರ್ ಆನೆ ಹೊರುತ್ತಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಆಡಳಿತ ಸಂಸ್ಥೆ ಮತ್ತು ವೈದ್ಯರು ತುರ್ತು ಸಭೆ ನಡೆಸಿ ಸಾಗರ್ ಆನೆಯ ಬದಲಿಗೆ ಸೋಮಣ್ಣ ಆನೆಯಿಂದ ಅಂಬಾರಿ ಹೊರಿಸುವ ತೀರ್ಮಾನ ಮಾಡಿದರು. ಆದರೆ ಆ ತೀರ್ಮಾನದಿಂದ ಸಮಸ್ಯೆ ಉಂಟಾಗಿದೆ. ಮೊದಲ ಬಾರಿಗೆ ಅಂಬಾರಿ ಹೊತ್ತ ಸೋಮಣ್ಣ ಆನೆ ಬೆದರಿದೆ.
ದಸರಾಗೆ ಚಾಲನೆ
ಇಂದು (ಅಕ್ಟೋಬರ್ 21) ಬೆಳಿಗ್ಗೆ ಶಾಸಕ ಚನ್ನಬಸಪ್ಪ, ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉತ್ಸುವಕ್ಕೆ ಚಾಲನೆ ನೀಡಿದರು. ಸೋಮಣ್ಣ ಆಸೆ ಬೆಳ್ಳಿಯ ಅಂಬಾರಿಯನ್ನು ಹೊತ್ತು ಸಾಗಿತು. ಅದರ ಜೊತೆಗೆ ಸಾಗರ್ ಹಾಗೂ ಬಹದ್ಧೂರ್ ಆನೆಗಳು ಸಾಥ್ ನೀಡಿದ್ದವು. ಆರಂಭದಲ್ಲಿ ಆರಾಮವಾಗಿ ಅಂಬಾರಿ ಹೊತ್ತ ಸಾಗರ್ ಆನೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನೆರೆದಿದ್ದ ಜನರನ್ನು ಕಂಡು ಗಾಬರಿ ಆಗಿ ಓಟ ಕಿತ್ತಿದೆ.
ಘಟನೆ ನಡೆದಿದ್ದು ಹೇಗೆ?
ಸೋಮಣ್ಣ ಆನೆ ಅಂಬಾರಿಯ ಸಮೇತ ವಾಸವಿ ಶಾಲೆಯತ್ತ ದೌಡಾಯಿಸಿದೆ. ಆನೆಯ ಮೇಲೆ ಕಟ್ಟಲಾಗಿದ್ದ ಬೆಳ್ಳಿಯ ಅಂಬಾರಿ ಕೆಳಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಕೆಲ ಕಾರುಗಳ ಸಹ ಜಖಂ ಆಗಿವೆ. ಆನೆ ಅಂಬಾರಿ ನೋಡಲು ಸೇರಿದ್ದ ಜನರಂತೂ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಕೆಲ ಕ್ಷಣ ಸ್ಥಳದಲ್ಲಿ ಗೊಂದಲ ಮತ್ತು ಆತಂಕದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಸೋಮಣ್ಣ ಆನೆಯನ್ನು ನಿಂತ್ರಣಕ್ಕೆ ತರಲು ಮಾವುತರು, ಕಾವಾಡಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಟ್ಟರು. ಕೊನೆಗೂ ಆನೆ ನಿಯಂತ್ರಣಕ್ಕೆ ಸಿಕ್ಕಿತು.




