☔ Weather
Bengaluru: ☁️ 23°C | AQI 55
Mysore: ☁️ 25°C | AQI 60
Mangalore: ☁️ 30°C | AQI 142
Bengaluru: ☁️ 23°C | AQI 55

YATNAL : ವಿಜಯೇಂದ್ರ ಭೇಟಿ ಹಿಂದೆ ರಾಜಕೀಯ ಇಲ್ಲ – ನಾಯಕತ್ವ ಬದಲಾವಣೆಯೇ ಷರತ್ತು : ಯತ್ನಾಳ್

Image of Basanagouda patil Yatnal

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಭೇಟಿಯ ರಹಸ್ಯವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಬಿಚ್ಚಿಟ್ಟಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ವಿಜಯೇಂದ್ರ ಅವರ ಜತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಪತ್ರಕರ್ತರ ಮನೆಯಲ್ಲಿ ರಾಜಕೀಯ ಮಾತನಾಡಲು ಸಾಧ್ಯವಿಲ್ಲ, ಒಪ್ಪಂದ ಮಾಡಿಕೊಳ್ಳಲು ಆಗುವುದಿಲ್ಲ ಎಂದ ಅವರು, ಕೇವಲ ಆರಾಮದ ಮಾತುಕತೆ ನಡೆದಿದೆ ಎಂದು ವಿವರಿಸಿದರು. ಮುರುಗೇಶ್ ನಿರಾಣಿ ಅವರ ಜತೆ ಎರಡು ಗಂಟೆ ಮಾತುಕತೆ ನಡೆದಿದೆ ಎಂಬ ಸುದ್ದಿಯನ್ನು ಅವರು ತಳ್ಳಿಹಾಕಿದರು. ಕಳೆದ ಮೂರು ದಶಕಗಳಿಂದ ನಾರಾಯಣಸಾ ಬಾಂಡಗೆ ಅವರ ಮನೆಗೆ ದಸರಾ ಊಟಕ್ಕೆ ಹೋಗುವ ಸಂಪ್ರದಾಯ ಇದೆ ಎಂದು ನೆನಪಿಸಿದ ಅವರು, ಆಯುಧ ಪೂಜೆಯ ದಿನ ದೇವಿಯ ಪ್ರಸಾದಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ನಿರಾಣಿ ಅವರು ಅಲ್ಲಿ ಸಿಕ್ಕಿದ್ದರು ಎಂದು ಹೇಳಿದರು. ಇಬ್ಬರೂ ಊಟ ಮಾಡಿ ತಮ್ಮ ತಮ್ಮ ವಾಹನಗಳಲ್ಲಿ ಹೊರಟು ಹೋದರು ಹೊರತು ವಿಶೇಷ ಚರ್ಚೆ ಏನೂ ನಡೆಯಲಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ರಾಜಕೀಯ ನಿರ್ಧಾರ ಇಲ್ಲ..!

ತಾವು ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪುನರುಚ್ಚರಿಸಿದ ಯತ್ನಾಳ್, ಸಂಧಾನದ ಮಾತುಕತೆಗಳು ದೆಹಲಿಯಲ್ಲಿ ಮಾತ್ರ ನಡೆಯುತ್ತವೆ ಎಂದು ಹೇಳಿದರು. ವರಿಷ್ಠರು ಕರೆದಾಗ ಮಾತ್ರ ಹೋಗಿ ಮಾತನಾಡುವುದು ವಾಡಿಕೆ ಎಂದು ತಿಳಿಸಿದ ಅವರು, ನಾಳೆ ದೆಹಲಿಗೆ ಹೋಗುತ್ತಿರುವುದು ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಮನವಿ ಸಲ್ಲಿಸಲು ಮಾತ್ರ ಎಂದು ಹೇಳಿದರು. ಎರಡು ದಿನ ದೆಹಲಿಯಲ್ಲಿದ್ದರೂ ಯಾವುದೇ ನಾಯಕರನ್ನು ಭೇಟಿ ಮಾಡುವುದಿಲ್ಲ, ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಯಾರ ಮುಂದೆಯೂ ಬೇಡಿಕೊಳ್ಳುವುದಿಲ್ಲ ಎಂದು ಅವರು ಗುಡುಗಿದರು. ಕಳೆದ ಎರಡು ದಿನಗಳಿಂದ ತಮ್ಮ ಜತೆ ಮಾತನಾಡದವರೂ ಮಾತನಾಡಲು ಆರಂಭಿಸಿದ್ದಾರೆ, ಯತ್ನಾಳ್ ಬಿಜೆಪಿಗೆ ಬರುತ್ತಾರೆ ಎಂದು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ವಾಜಪೇಯಿ ಕಾಲದಿಂದ ಪಕ್ಷಕ್ಕಾಗಿ ದುಡಿದವರ ಭಾವನೆಯನ್ನು ಕೇಂದ್ರ ನಾಯಕರು ಅರ್ಥಮಾಡಿಕೊಳ್ಳಬೇಕು, ವಿರೋಧ ಪಕ್ಷವಾಗಿ ರಾಜ್ಯ ನಾಯಕರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ವರದಿ ಪಡೆಯಬೇಕು ಎಂದು ಒತ್ತಾಯಿಸಿದರು. ತಮಗೆ ಅವಕಾಶ ಕೊಡುವುದಾದರೆ ಮೊದಲ ಸ್ಥಾನವೇ ನೀಡಬೇಕು, ತಾವು ಎಂದೂ ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ ಎಂದು ಹೇಳಿದ ಅವರು, ಬಹಳ ದಿನಗಳ ಹಿಂದೆಯೇ ವರಿಷ್ಠರಿಂದ ಸುಳಿವು ಸಿಕ್ಕಿದೆ ಆದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು, ಅದೇ ತಮ್ಮ ಮೊದಲ ಷರತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಆರ್ಎಸ್ಎಸ್ ಸಂವಿಧಾನಕ್ಕಿಂತ ದೊಡ್ಡದಲ್ಲ, ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಯತ್ನಾಳ್ ಅವರ ಈ ಹೇಳಿಕೆ ರಾಜ್ಯ ಬಿಜೆಪಿಯ ಒಳಗಿನ ಬಿಕ್ಕಟ್ಟನ್ನು ಮತ್ತೊಮ್ಮೆ ಬಹಿರಂಗಗೊಳಿಸಿದಂತಾಗಿದೆ. ಭೇಟಿಯನ್ನು ಸಾಮಾನ್ಯ ಭೇಟಿ ಎಂದು ಹೇಳುವ ಮೂಲಕ ಅವರು ಸದ್ಯಕ್ಕೆ ಊಹಾಪೋಹಗಳಿಗೆ ತೆರೆ ಎಳೆಯಲು ಯತ್ನಿಸಿದರೂ, ನಾಯಕತ್ವ ಬದಲಾವಣೆ ಷರತ್ತು ಹಾಕುವ ಮೂಲಕ ಹೈಕಮಾಂಡ್ ಮೇಲೆ ಪರೋಕ್ಷ ಒತ್ತಡ ಹೇರಿದ್ದಾರೆ. ಕಬ್ಬು ರೈತರ ವಿಚಾರವನ್ನು ಮುಂದಿಟ್ಟು ದೆಹಲಿ ಪ್ರವಾಸವನ್ನು ಸಮರ್ಥಿಸಿಕೊಳ್ಳುವುದು, ತಾವು ಪಕ್ಷದ ಹಿತಕ್ಕಾಗಿ ಹೋರಾಡುತ್ತಿರುವ ನಾಯಕ ಎಂಬ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನದಂತೆ ಕಾಣುತ್ತಿದೆ. ಅದೇ ಸಮಯದಲ್ಲಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಿರುವುದನ್ನು ಪ್ರಸ್ತಾಪಿಸಿ ರಾಜ್ಯ ನಾಯಕತ್ವದ ದುರ್ಬಲತೆಯನ್ನು ಎತ್ತಿ ತೋರಿಸಿರುವುದು, ಬಿಜೆಪಿ ಕಾರ್ಯಕರ್ತರಲ್ಲಿ ಇರುವ ಅಸಮಾಧಾನಕ್ಕೆ ಧ್ವನಿ ಕೊಟ್ಟಂತಾಗಿದೆ. ಮುಂದೆ ವರಿಷ್ಠರು ಈ ಷರತ್ತಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಯತ್ನಾಳ್ ಅವರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದೆ.