ನವದೆಹಲಿ : ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜಂತರ್ ಮಂತರ್ ಬಳಿ ರಾಷ್ಟ್ರಧ್ವಜ ಹಾರಿಸಲು ಪ್ರಯತ್ನಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಕ್ರೋಚ್ ಜನತಾ ಪಕ್ಷದ (CJP) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್ ನಲ್ಲಿ ನಡೆದಿದೆ. ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಪೀಠದ ಮುಂದೆ ಈ ಅರ್ಜಿ ಬಂದಾಗ ನ್ಯಾಯಾಲಯ ಅರ್ಜಿದಾರರ ವಯಸ್ಸಿನ ಬಗ್ಗೆ ಕುತೂಹಲಕಾರಿ ಪ್ರಶ್ನೆ ಎತ್ತಿದೆ. ಅರ್ಜಿದಾರರ ಪರ ವಕೀಲ ಅಭಿಕ್ ಚಿಮ್ನಿ ಅವರು ಸೌರವ್ ದಾಸ್ ಗೆ 27 ವರ್ಷ ಮತ್ತು ಅಶುತೋಷ್ ರಂಕಾ ಗೆ 32 ವರ್ಷ ಎಂದು ಹೇಳಿದಾಗ, 1997ರ ನಂತರ ಜನಿಸಿದವರನ್ನು ಮಾತ್ರ ಜೆನ್ ಝೀ ಎಂದು ಕರೆಯಲಾಗುತ್ತದೆ ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ನೀವು ಜೆನ್ ಝೀ ಅಲ್ಲ ಎಂದು ನ್ಯಾಯಾಲಯ ಪುನಃ ಹೇಳಿದೆ.
ಹೋರಾಟಗಾರರಿಗೆ ಹೈಕೋರ್ಟ್ ಚಾಟಿ..!
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 126 ಮತ್ತು 170ರ ಅಡಿ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 19ರಂದು ನೀಡಿದ್ದ ಆದೇಶದ ಮೂಲಕ ಇಬ್ಬರು ಕಾರ್ಯಕರ್ತರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸಿದ್ದರು. ಈ ಆದೇಶವನ್ನು ರದ್ದು ಮಾಡಿ ತಕ್ಷಣ ಬಿಡುಗಡೆ ಮಾಡಬೇಕು, ಬಂಧನ ವಿಸ್ತರಣೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ತಮ್ಮ ಬಂಧನ ಕಾನೂನುಬಾಹಿರವಾಗಿದೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು. ಆದರೆ ಪರಿಷ್ಕರಣೆ ಎನ್ನುವ ಪರ್ಯಾಯ ಪರಿಹಾರ ಲಭ್ಯವಿರುವಾಗ ನೇರವಾಗಿ ಸಂವಿಧಾನದ 266ನೇ ವಿಧಿಯಡಿ ಹೈಕೋರ್ಟ್ ಗೆ ಏಕೆ ಬಂದಿದ್ದೀರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ. ದೆಹಲಿ ಪೊಲೀಸರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಮತ್ತು ವಕೀಲ ಆಶಿಷ್ ದೀಕ್ಷಿತ್ ಹಾಜರಿದ್ದರು. ಇದು ನಿಮ್ಮ ಎರಡನೇ ಘಟನೆ, ನೀವು ಬಾಂಡ್ ಮುರಿದಿರುವ ವ್ಯಕ್ತಿ, ನಿಮ್ಮ ಪರಿಹಾರ ಪರಿಷ್ಕರಣೆಯಲ್ಲಿದೆ ಎಂದು ನ್ಯಾಯಾಲಯ ಹೇಳಿದ್ದು, ಅದೇ ದಿನ ಎಸ್.ಇ.ಎಂ ಮುಂದೆ ವಿಚಾರಣೆ ಇರುವಾಗ ಹೈಕೋರ್ಟ್ ಗೆ ಬರುವ ಅಗತ್ಯವೇನಿತ್ತು ಎಂದು ಕೇಳಿದೆ. ಅಂತಿಮವಾಗಿ ಅರ್ಜಿಯನ್ನು ಹಿಂಪಡೆಯುವ ಬಗ್ಗೆ ಯೋಚಿಸುವಂತೆ ನ್ಯಾಯಮೂರ್ತಿ ಪ್ರಸಾದ್ ಸೂಚಿಸಿದ್ದಾರೆ.
ಇದನ್ನೂ ಓದಿ : ಆರ್ಎಸ್ಎಸ್ ಸಂವಿಧಾನಕ್ಕಿಂತ ದೊಡ್ಡದಲ್ಲ, ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಈ ಪ್ರಕರಣದಲ್ಲಿ ಹೈಕೋರ್ಟ್ ಎತ್ತಿದ ವಯಸ್ಸಿನ ಪ್ರಶ್ನೆ ಕೇವಲ ಹಾಸ್ಯದ ಮಾತಾಗಿ ಉಳಿಯದೆ, ಇಂದಿನ ಪ್ರತಿಭಟನೆಗಳಲ್ಲಿ ಜೆನ್ ಝೀ ಎನ್ನುವ ಹೆಸರನ್ನು ಹೇಗೆ ಬಳಸಲಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ. ಯಾವುದೇ ಚಳವಳಿಗೆ ಯುವಕರ ಹೆಸರು ಅಂಟಿಸಿದರೆ ಅದಕ್ಕೆ ಹೆಚ್ಚು ಗಮನ ಸಿಗುತ್ತದೆ ಎನ್ನುವ ಭಾವನೆ ಕೆಲವರಲ್ಲಿದೆ, ಆದರೆ ನ್ಯಾಯಾಲಯ ಇಲ್ಲಿ ವಾಸ್ತವ ಮತ್ತು ಕಾನೂನು ಎರಡನ್ನೂ ಬೇರೆ ಬೇರೆಯಾಗಿ ನೋಡಿದೆ. ನಿಷೇಧಾಜ್ಞೆ ಇದ್ದ ಜಾಗದಲ್ಲಿ ಧ್ವಜ ಹಾರಿಸುವ ಪ್ರಯತ್ನ, ಬಾಂಡ್ ಉಲ್ಲಂಘನೆ ಮತ್ತು ಪರ್ಯಾಯ ಪರಿಹಾರ ಇದ್ದರೂ ನೇರವಾಗಿ ಹೈಕೋರ್ಟ್ ಗೆ ಬರುವುದು ಇವೆಲ್ಲವೂ ಕಾನೂನಿನ ಪ್ರಕ್ರಿಯೆಯನ್ನು ಬೈಪಾಸ್ ಮಾಡುವ ಯತ್ನವಾಗಿ ಕಾಣುತ್ತದೆ. ಪ್ರತಿಭಟನೆಯ ಹಕ್ಕು ಇದೆ ಎನ್ನುವುದು ನಿಜ, ಆದರೆ ಆ ಹಕ್ಕನ್ನು ಬಳಸುವಾಗ ನಿಯಮಗಳನ್ನು ಪಾಲಿಸಬೇಕಾದ ಜವಾಬ್ದಾರಿಯೂ ಇದೆ ಎನ್ನುವುದನ್ನು ಈ ವಿಚಾರಣೆ ಮತ್ತೆ ನೆನಪಿಸಿದೆ.




