☔ Weather
Bengaluru: ☁️ 22°C | AQI 52
Mysore: 🌧️ 22°C | AQI 55
Mangalore: ☁️ 28°C | AQI 146
Bengaluru: ☁️ 22°C | AQI 52

Jailer 2: ‘ಜೈಲರ್ 2’ ನನ್ನ ಸಿನಿಮೀಯ ಅಹಂಕಾರಕ್ಕೆ ಅದರದ್ದೇ ಪೃಷ್ಠ ದರ್ಶನವಾದ ದಿನ!

Jailer 2

ಇತ್ತೀಚಿಗೆ ಹೆಂಡತಿಯ ಜೊತೆ ‘ಜೈಲರ್ 2’ (Jailer 2) ನೋಡಲು ಹೋದೆ. ಚಿತ್ರಮಂದಿರದೊಳಗೆ ಕಾಲಿಡುವಾಗ ಕೇವಲ ಒಂದು ಸಿನಿಮಾ ನೋಡುತ್ತಿದ್ದೇನೆ ಅಂದುಕೊಂಡಿದ್ದೆ. ಆದರೆ ಹೊರಬರುವಾಗ ಕಲೆ, ಆಧ್ಯಾತ್ಮ, ಮತ್ತು ನನ್ನ ಅಹಂಕಾರದ ನಿಖರವಾದ ಜಾಗ… ಇವೆಲ್ಲವನ್ನೂ ಪ್ರಶ್ನಿಸಿಕೊಳ್ಳುವಂತಾಗಿತ್ತು.

ಸಿನಿಮಾದಲ್ಲಿ ತರ್ಕ ಎನ್ನುವುದು ಎಳ್ಳಷ್ಟೂ ಇರಲಿಲ್ಲ. ಬಹುಶಃ ತರ್ಕವನ್ನು ಚಿತ್ರಮಂದಿರದ ಹೊರಗೆ ಚಪ್ಪಲಿ ಬಿಡುವ ಜಾಗದಲ್ಲೇ ಬಿಟ್ಟುಬನ್ನಿ ಎಂದು ಹೇಳಿದ್ದರೋ ಏನೋ! ಆದರೆ ನನ್ನ ಹೆಂಡತಿ ಮತ್ತು ಇಡೀ ಪ್ರೇಕ್ಷಕವರ್ಗ ಅದನ್ನು ಹುಚ್ಚೆದ್ದು ಸಂಭ್ರಮಿಸುತ್ತಿತ್ತು. ಚಿತ್ರಮಂದಿರವೊಂದು ಗುಡಿಯಾಗಿತ್ತು, ರಜನಿ ಅಲ್ಲಿನ ದೇವರು, ಮತ್ತು ಪ್ರೇಕ್ಷಕರು ‘ಭಕ್ತಿ’ಯ ಅತ್ಯುನ್ನತ ರೂಪವನ್ನು ಅನುಭವಿಸುತ್ತಿದ್ದರು.

ಈ ಭಕ್ತಸಾಗರದ ನಡುವೆ ಒಬ್ಬ ಪಕ್ಕಾ ಸ್ಮಾರ್ತನಂತೆ ಕುಳಿತಿದ್ದ ನಾನು ಮಾತ್ರ, ಆ ಮನುಷ್ಯ ಯಾಕೆ ಹಾಗೆ ಮಾಡುತ್ತಿದ್ದಾನೆ ಎನ್ನುವುದಕ್ಕೆ ಯಾವುದಾದರೂ ತಾರ್ಕಿಕ ಕಾರಣ ಸಿಗಬಹುದಾ ಎಂದು ತಲೆಕೆಡಿಸಿಕೊಳ್ಳುತ್ತಿದ್ದೆ. ಈ ಬ್ರಹ್ಮಾಂಡ ನನಗೊಂದು ಕರಾರುವಕ್ಕಾದ ಚಿತ್ರಕಥೆಯನ್ನು ಕೊಡಲೇಬೇಕು ಎನ್ನುವ ಹಠ ನನ್ನದು. ನನ್ನ ಒಳಗಿನ ‘ಸಿನಿಮಾ ವಿಮರ್ಶಕ’ ಒಪ್ಪದ ಹೊರತು, ಯಾವುದೇ ಸಿನಿಮಾಗೆ ಅಸ್ತಿತ್ವವೇ ಇಲ್ಲ ಎಂದು ನಂಬಿದ್ದ ನನ್ನ ಬೌದ್ಧಿಕ ಅಹಂಕಾರ ಅದು.

ಆದರೆ ನನ್ನ ಹೆಂಡತಿಯ ಖುಷಿ ಮತ್ತು ಪ್ರೇಕ್ಷಕರ ಆ ಉನ್ಮಾದದ ನಡುವೆ ನನಗೊಂದು ಆತಂಕಕಾರಿ ಸತ್ಯ ಹೊಳೆಯಿತು: ಬಹುಶಃ ಆ ಜಾಗದಲ್ಲಿ ಜ್ಞಾನೋದಯವಾದ ವ್ಯಕ್ತಿ ನಾನಲ್ಲ. ನನ್ನ ಅಸಹಾಯಕತೆಯನ್ನೇ, ‘ಶ್ರೇಷ್ಠ ಬುದ್ಧಿಮತ್ತೆ’ ಎಂದು ಭ್ರಮಿಸಿಕೊಂಡಿದ್ದ ಪೃಷ್ಠ ನಾನು ಅಷ್ಟೇ!

ಅಷ್ಟಕ್ಕೂ ಶ್ರೇಷ್ಠ ಸಿನಿಮಾ ಅಂದರೆ ಏನು? ಅಕೀರಾ ಕುರೊಸಾವಾ, ಸತ್ಯಜಿತ್ ರೇ ಅಥವಾ ಮಾರ್ಟಿನ್ ಸ್ಕಾರ್ಸೆಸೆ ಅವರ ಪವಿತ್ರ ಪೃಷ್ಠಗಳಿಂದ ಉದುರಿದರೆ ಮಾತ್ರ ಅದು ಕಲೆಯಾಗುತ್ತದಾ? ಸಿನಿಮಾದ ಪ್ರತಿಯೊಂದು ದೃಶ್ಯದಲ್ಲೂ ಮನುಷ್ಯನ ಯಾತನೆಯೇ ತುಂಬಿರಬೇಕೇ? ನಮ್ಮನ್ನು ನೋಡಲು ಸುಂದರವಾಗಿ ಕಾಣುವ ರೀತಿಯಲ್ಲಿ ದುಃಖಿಗಳನ್ನಾಗಿ ಮಾಡಿದರೆ ಮಾತ್ರ ಸಿನಿಮಾ ಶ್ರೇಷ್ಠ ಎನಿಸಿಕೊಳ್ಳುತ್ತದಾ? ಮೂರು ಗಂಟೆಗಳ ಕಾಲ ಅನ್ಯಾಯದ ಬಗ್ಗೆ ಧ್ಯಾನಿಸುವ ಕಲಾತ್ಮಕ ಸಿನಿಮಾಗೆ ಸುಲಭವಾಗಿ ಮನ್ನಣೆ ಕೊಡುವ ನಾವು, ಒಂದು ಜನಪ್ರಿಯ ಸಿನಿಮಾವನ್ನು ಸಂಭ್ರಮಿಸುವ ಮುನ್ನ ಅದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಯಾಕೆ ನಿರೀಕ್ಷಿಸುತ್ತೇವೆ?

ಹಾಗಂತ, ಪ್ರೇಕ್ಷಕರಿಗೆ ಇಷ್ಟವಾದ ತಕ್ಷಣ ಅದು ‘ಒಳ್ಳೆಯ’ ಸಿನಿಮಾ ಆಗಿಬಿಡುತ್ತದಾ? ಐನೂರು ಜನ ಒಟ್ಟಿಗೆ ಶಿಳ್ಳೆ ಹೊಡೆದರು ಎಂದರೆ ಅದೊಂದು ಅದ್ಭುತ ಕಲಾತ್ಮಕ ಅನುಭವವೋ, ಅಥವಾ ಅವರೆಲ್ಲರೂ ಒಟ್ಟಿಗೆ ತಮ್ಮ ತರ್ಕವನ್ನು ಬದಿಗಿಡಲು ಒಪ್ಪಿಕೊಂಡಿದ್ದಾರೋ? ಸಿನಿಮಾ ತರ್ಕಕ್ಕೆ ನಿಲುಕುವುದು ಬೇರೆ, ಸಿನಿಮಾ ನಮ್ಮನ್ನು ರೋಮಾಂಚನಗೊಳಿಸುವುದು ಬೇರೆ. ಜಗತ್ತಿನ ಕಲಾತ್ಮಕ ಸಿನಿಮಾಗಳ ಒಪ್ಪಿಗೆಗಾಗಿ ಆ ಪ್ರೇಕ್ಷಕರು ಕಾಯುತ್ತಿರಲಿಲ್ಲ. ಅವರ ಪಾಲಿಗೆ ಅದೊಂದು ಸಾಮೂಹಿಕ ಸಂಭ್ರಮ. ಅವರ ಆ ಖುಷಿ, ನನ್ನ ಬೌದ್ಧಿಕ ತೊಡಗಿಸಿಕೊಳ್ಳುವಿಕೆಗಿಂತ ಕಮ್ಮಿ ದರ್ಜೆಯದ್ದಲ್ಲ, ಅದೊಂದು ಬೇರೆಯದ್ದೇ ರೀತಿಯ ಅನುಭವವಷ್ಟೇ.

ನಾನು ‘ಉತ್ತಮ ಅಭಿರುಚಿ’ ಬೆಳೆಸಿಕೊಳ್ಳುವ ಭರದಲ್ಲಿ, ತಿಳಿಯದೆಯೇ ‘ಖುಷಿ’ಗೆ ಅಲರ್ಜಿ ಬೆಳೆಸಿಕೊಂಡುಬಿಟ್ಟೆನಾ ಎನ್ನುವ ಅನುಮಾನ ಈಗ ಕಾಡುತ್ತಿದೆ. ನಾನು ಒಂದು ಸಿನಿಮಾದ ತಪ್ಪುಗಳನ್ನು ಹುಡುಕಬಲ್ಲೆ, ಶ್ರೇಷ್ಠ ಸಿನಿಮಾಗಳ ಜೊತೆ ಹೋಲಿಸಬಲ್ಲೆ. ಕೊನೆಗೆ ಬೌದ್ಧಿಕವಾಗಿ ತೃಪ್ತನಾಗಬಹುದು, ಆದರೆ ಭಾವನಾತ್ಮಕವಾಗಿ ಖಾಲಿ ಉಳಿಯುತ್ತೇನೆ. ಸಿನಿಮಾ ಯಾಕೆ ಸೋತಿತು ಅಂತ ಗಂಟೆಗಟ್ಟಲೆ ವಿವರಿಸುವ ನನಗಿಂತ, ಏನನ್ನೂ ವಿವರಿಸದೆ ಆ ಸಂಜೆಯನ್ನು ಅದ್ಭುತವಾಗಿ ಆನಂದಿಸಿದ ಆ ಪ್ರೇಕ್ಷಕರೇ ನನಗಿಂತ ಹೆಚ್ಚು ಬುದ್ಧಿವಂತರು ಅನಿಸುತ್ತಿದೆ.

ಇಷ್ಟೆಲ್ಲಾ ತತ್ವಜ್ಞಾನ ಮಾತನಾಡಿದರೂ, ನನ್ನ ಮನಸ್ಸು ಮತ್ತೆ ಮತ್ತೆ ಆ ‘ಪೃಷ್ಠ’ದ ಕಡೆಗೇ ಯಾಕೆ ಹೋಗುತ್ತಿದೆ? ದಾಸ ದಾಸರ ದಾಸ ನಾನು ದಾಸನು ದಾಸ ಎಂಬ ಭಕ್ತಿಯಲ್ಲಿ ಮಾತ್ರ ಮುಕ್ತಿ ಇದೆಯೇ? ಇದೇ ಕಾರಣಕ್ಕೇ ಶಂಕರರು ಕೂಡ “ಭಜಗೋವಿಂದಂ ಮೂಢಮತೆ” ಎಂದುಬಿಟ್ಟಿದ್ದರೆ? ಅಥವಾ ಇದು ನಿಜವಾಗಿಯೂ ನನ್ನ ಬುದ್ಧಿಮತ್ತೆಯ ಪರಿಮಾಣದ ಬಗ್ಗೆ ಈ ಬ್ರಹ್ಮಾಂಡ ನೀಡುತ್ತಿರುವ ಶಿಕ್ಷಣವೇ?

ಬಹುಶಃ ಈ ಹೊಸ ಸತ್ಯಗಳು ನನಗೆ ಅಲ್ಲಿಯೇ ಚುಚ್ಚುತ್ತಿವೆ. ವರ್ಷಗಳಿಂದ ನಾನು ಬೆಳೆಸಿಕೊಂಡ ‘ಶ್ರೇಷ್ಠ ಅಭಿರುಚಿ’ ಎಂಬ ಸಿಂಹಾಸನದ ಮೇಲೆ ಕುಳಿತಿದ್ದ ನನಗೆ, ಆ ಸಿಂಹಾಸನ ಬರೀ ಒಂದು ಕುರ್ಚಿ, ಆ ಕಿರೀಟ ಬರೀ ಕಲ್ಪನೆ ಮತ್ತು ಅಲ್ಲಿ ಕುಳಿತ ವ್ಯಕ್ತಿ ತನ್ನ ಪೃಷ್ಠವನ್ನು ಅನಗತ್ಯವಾಗಿ ಊದಿಸಿಕೊಂಡಿದ್ದ ಒಬ್ಬ ಅಹಂಕಾರಿ ಎನ್ನುವುದು ಕೊನೆಗೂ ಅರ್ಥವಾಗುತ್ತಿದೆ!

ಜೈಲರ್ 2 ಒಂದು ಒಳ್ಳೆಯ ಸಿನಿಮಾನಾ? ನನಗಿನ್ನೂ ಗೊತ್ತಿಲ್ಲ. ಜನಪ್ರಿಯ ಸಿನಿಮಾ ನಮ್ಮ ಮಟ್ಟಕ್ಕೆ ತಕ್ಕುದಲ್ಲ ಎನ್ನುವುದಕ್ಕಿಂತ, ಕೆಲವು ಸಾಮಾನ್ಯ ಖುಷಿಗಳು ನಮ್ಮ ಯೋಗ್ಯತೆಗೆ ಸರಿಹೊಂದುವುದಿಲ್ಲ ಎಂದು ನಂಬುವ ನಮ್ಮ ಹಠದ ಬಗ್ಗೆ ನಾವೇ ಪ್ರಶ್ನಿಸಿಕೊಳ್ಳಬೇಕೇನೋ.

ಏನೇ ಇರಲಿ, ಜೈಲರ್ 2 ಸೌಂದರ್ಯಪ್ರಜ್ಞೆ, ಅಹಂಕಾರ, ಭಕ್ತಿ ಮತ್ತು ನನ್ನ ಪೃಷ್ಠ – ಇವುಗಳ ನಡುವಿನ ಸಂಬಂಧವನ್ನು ಪ್ರಶ್ನಿಸುವಂತೆ ಮಾಡಿದೆ! ಇದು ಭಾರತೀಯ ತತ್ವಶಾಸ್ತ್ರಕ್ಕೆ ಈ ಸಿನಿಮಾ ಕೊಟ್ಟ ದೊಡ್ಡ ಕೊಡುಗೆ.

ಸಿನಿಮಾ ನನ್ನ ‘ತರ್ಕಬದ್ಧ ಚಿಂತನೆ’ಯನ್ನು ಪರೀಕ್ಷೆ ಮಾಡಿರಬಹುದು. ಪ್ರೇಕ್ಷಕರು ತಮ್ಮ ತರ್ಕವನ್ನು ಬದಿಗಿಟ್ಟು ಅದ್ಭುತ ಸಮಯ ಕಳೆದರು. ನಾನು ಮಾತ್ರ ನನ್ನ ಆನಂದಿಸುವ ಸಾಮರ್ಥ್ಯವನ್ನೇ ಬದಿಗಿಟ್ಟು, ನನ್ನ ಪೃಷ್ಠದ ಬಗ್ಗೆ ಒಂದು ಪ್ರಬಂಧ ಬರೆದೆ!

ಅಂತಿಮವಾಗಿ ಇಲ್ಲಿ ಗೆದ್ದದ್ದು ರಜನಿಕಾಂತ್, ಸೋತು ಮಕಾಡೆ ಮಲಗಿದ್ದು ನನ್ನ ‘ಬುದ್ಧಿಜೀವಿ’ ಅಹಂಕಾರ!

ಎಲ್ಲೋ ಕುಳಿತು ಕುರೊಸಾವಾ ಆನಂದ ಭಾಷ್ಪ ಸುರಿಸುತ್ತಾ, ತನ್ನ ಪೃಷ್ಠ ಬಡಿದುಕೊಂಡು ಬಿದ್ದು ಬಿದ್ದು ನಗುತ್ತಿರಬೇಕು. ಅವರು ಹಾಗೆ ನಗುತ್ತಿರಲಿ ಎಂದೇ ಆಶಿಸುತ್ತೇನೆ.