ಕೋಲ್ಕತ್ತಾ: ಟಿಎಂಸಿ (TMC) ಪಕ್ಷ ಬಿಟ್ಟು ಹೋದ ದ್ರೋಹಿಗಳು 15 ದಿನದೊಳಗೆ ವಾಪಸ್ ಬನ್ನಿ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಸಂಘಟನೆಯನ್ನು ಮತ್ತೆ ಬಲಪಡಿಸುವ ನಿಟ್ಟಿನಲ್ಲಿ ಉತ್ತರ ದಿನಾಜ್ಪುರದಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಎಂಸಿಯಿಂದ ಗೆದ್ದು ನಂತರ ಪಕ್ಷ ತೊರೆದ ಸಂಸದರು ಮತ್ತು ಶಾಸಕರು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 15 ದಿನದ ಗಡುವಿನೊಳಗೆ ಮರಳಿದರೆ ಸ್ವಾಗತಿಸುವುದಾಗಿ, ಆ ಅವಧಿ ಮುಗಿದ ನಂತರ ಬಂದವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕರ್ತರೇ ನಿಜವಾದ ಶಕ್ತಿ !
ಇದೇ ವೇದಿಕೆಯಲ್ಲಿ ಮಮತಾ ಅವರು ಪಕ್ಷದ ನಿಜವಾದ ಶಕ್ತಿ ನಾಯಕರಲ್ಲ, ತಳಮಟ್ಟದ ಸಾಮಾನ್ಯ ಕಾರ್ಯಕರ್ತರು ಎಂದು ಪ್ರತಿಪಾದಿಸಿದರು. 1998ರಲ್ಲಿ ಶೂನ್ಯದಿಂದ ಟಿಎಂಸಿಯನ್ನು ಕಟ್ಟಿದಂತೆ ಮತ್ತೆ ಪಕ್ಷವನ್ನು ಸಂಘಟಿಸಿ ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿ, ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳಬಾರದು, ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಅದೇ ಕಾರ್ಯಕ್ರಮದಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಧಿಕಾರದಲ್ಲಿರುವವರೆಗೆ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಆರೋಪಿಸಿದರು. ರಾಷ್ಟ್ರಮಟ್ಟದಲ್ಲೂ ಟಿಎಂಸಿಯ ಪಾತ್ರವನ್ನು ಪ್ರಸ್ತಾಪಿಸಿ, ತೃಣಮೂಲ ಕಾಂಗ್ರೆಸ್ ಇಲ್ಲದೆ ಇಂಡಿಯಾ ಮೈತ್ರಿಕೂಟ ಬಲಿಷ್ಠವಾಗಲು ಸಾಧ್ಯವಿಲ್ಲ, ಬಿಜೆಪಿಯನ್ನು ಎದುರಿಸಲು ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಮತದಾರರ ಹಕ್ಕು ಕಸಿದುಕೊಳ್ಳುವುದು ಸಂವಿಧಾನದ ಆತ್ಮಕ್ಕೆ ಮಾರಕ: ನ್ಯಾ.ಉಜ್ಜಲ್ ಭುಯಾನ್ ಎಚ್ಚರಿಕೆ
ಈ ಹದಿನೈದು ದಿನಗಳ ಗಡುವು ಕೇವಲ ಎಚ್ಚರಿಕೆಯಲ್ಲ, ಇದು ಮಮತಾ ಅವರ ರಾಜಕೀಯ ಲೆಕ್ಕಾಚಾರದ ಭಾಗವಾಗಿದೆ. 2026ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಟಿಎಂಸಿಯಲ್ಲಿ ಪಕ್ಷಾಂತರದ ಆತಂಕ ಹೆಚ್ಚಾಗಿದೆ. ಬಿಜೆಪಿ ಆಪರೇಷನ್ ಕಮಲ ಮಾದರಿಯಲ್ಲಿ ಶಾಸಕರು ಮತ್ತು ಸಂಸದರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಹಿನ್ನೆಲೆಯಲ್ಲಿ ದೀದಿ ಈ ಅಂತಿಮ ಅವಕಾಶ ನೀಡಿದ್ದಾರೆ. ತೊರೆದು ಹೋದವರಿಗೆ ಬಾಗಿಲು ತೆರೆಯುವ ಮೂಲಕ ಉದಾರ ನಾಯಕಿ ಎಂಬ ಸಂದೇಶ ನೀಡುವ ಜೊತೆಗೆ ಗಡುವಿನ ನಂತರ ಕಠಿಣ ನಿಲುವು ತೋರಿಸಿ ಪಕ್ಷದಲ್ಲಿ ಶಿಸ್ತು ತರಲು ಹೊರಟಿದ್ದಾರೆ. 1998ರಲ್ಲಿ ಕಾಂಗ್ರೆಸ್ ನಿಂದ ಹೊರಬಂದು ಶೂನ್ಯದಿಂದ ಟಿಎಂಸಿ ಕಟ್ಟಿದ ಇತಿಹಾಸವನ್ನು ನೆನಪಿಸುವುದು ಕಾರ್ಯಕರ್ತರಲ್ಲಿ ಭಾವನಾತ್ಮಕ ಸಂಬಂಧ ಬೆಸೆಯುವ ತಂತ್ರ ಎಂಬಂತಿದೆ.
ಟಿಎಂಸಿ ಪಕ್ಷದ ನಾಯಕರಿಗಿಂತ ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ ಎನ್ನುವ ಮೂಲಕ ಹಳೆಯ ನಾಯಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಹೊಸ ಪಡೆಯನ್ನು ಕಟ್ಟುವ ಸೂಚನೆ ನೀಡಿದ್ದಾರೆ. ಚುನಾವಣಾ ಆಯೋಗದ ವಿರುದ್ಧದ ವಾಗ್ದಾಳಿ ಬಂಗಾಳದಲ್ಲಿ ಬಿಜೆಪಿ ವಿರುದ್ಧದ ತಮ್ಮ ನಿರಂತರ ಹೋರಾಟದ ನಿರೂಪಣೆಯನ್ನು ಮುಂದುವರಿಸುವ ಪ್ರಯತ್ನ. ಮುಖ್ಯ ಚುನಾವಣಾ ಆಯುಕ್ತರ ಹೆಸರು ಹೇಳಿ ಟೀಕಿಸುವುದು ಕೇಂದ್ರ ಸಂಸ್ಥೆಗಳು ಪಕ್ಷಪಾತ ಮಾಡುತ್ತಿವೆ ಎಂಬ ಆರೋಪವನ್ನು ಜನರ ಮುಂದಿಡುವ ಉದ್ದೇಶ ಇರಬಹುದು. ಇಂಡಿಯಾ ಮೈತ್ರಿಕೂಟದಲ್ಲಿ ಟಿಎಂಸಿ ಇಲ್ಲದೆ ಬಲ ಬರುವುದಿಲ್ಲ ಎಂಬ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪಾತ್ರವನ್ನು ಒತ್ತಿ ಹೇಳುವ ಜೊತೆಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಉತ್ತರ ದಿನಾಜ್ಪುರದಂತಹ ಅಲ್ಪಸಂಖ್ಯಾತ ಮತ್ತು ರಾಜಬಂಶಿ ಮತಗಳು ನಿರ್ಣಾಯಕವಾಗಿರುವ ಗಡಿ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ತಮ್ಮ ನೆಲೆ ಇನ್ನೂ ಗಟ್ಟಿಯಾಗಿದೆ ಎಂದು ತೋರಿಸಲು ಬಯಸಿದ್ದಾರೆ. ಈ ಗಡುವು ಎಷ್ಟು ಜನರನ್ನು ವಾಪಸ್ ಕರೆತರುತ್ತದೆ ಎಂಬುದಕ್ಕಿಂತ ಪಕ್ಷದೊಳಗೆ ಉಳಿದಿರುವವರಲ್ಲಿ ನಿಷ್ಠೆಯನ್ನು ಗಟ್ಟಿಗೊಳಿಸುವಲ್ಲಿ ಹೆಚ್ಚು ಪರಿಣಾಮ ಬೀರಲಿದೆ.




