ಆಂಧ್ರಪ್ರದೇಶ : ಮತದಾನದ ಹಕ್ಕು ಕಸಿದುಕೊಳ್ಳುವುದು ಮತ್ತು ಎಸ್.ಐ.ಆರ್ ಕುರಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು, ವೋಟಿಂಗ್ ಹಕ್ಕು ಕಸಿದುಕೊಳ್ಳುವುದು ಸಂವಿಧಾನದ ಮೂಲ ಆಶಯದ ಮೇಲಿನ ದಾಳಿಗೆ ಸಮಾನ ಎಂದು ಹೇಳಿದ್ದಾರೆ. ಹೈದರಾಬಾದ್ ನಲ್ಲಿರುವ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ 19ನೇ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಲಕ್ಷಾಂತರ ನಾಗರಿಕರನ್ನು ಮತದಾನದಿಂದ ವಂಚಿತರನ್ನಾಗಿ ಮಾಡುವ ಯಾವುದೇ ಪ್ರಕ್ರಿಯೆ ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಏಕಪಕ್ಷೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರಮ ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆ ತರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಎರಡನೇ ದರ್ಜೆಯ ನಾಗರಿಕರು ಸೃಷ್ಟಿಯಾಗಬಾರದು
ಭಾರತದ ಸಂವಿಧಾನ ಮತದ ಹಕ್ಕಿರುವವರು ಮತ್ತು ಇಲ್ಲದವರು ಎಂದು ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಲು ಅವಕಾಶ ನೀಡುವುದಿಲ್ಲ. ಮತದ ಹಕ್ಕಿಲ್ಲದ ವ್ಯಕ್ತಿಯನ್ನು ತನ್ನದೇ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುವುದು ಸಂವಿಧಾನ ಬಾಹಿರ, ಇದನ್ನು ಯಾವುದೇ ಪ್ರಾಧಿಕಾರ ಮಾಡುವಂತಿಲ್ಲ ಮತ್ತು ಯಾವುದೇ ನ್ಯಾಯಾಲಯ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮತದ ಹಕ್ಕನ್ನು ಕಸಿದುಕೊಳ್ಳುವುದು ಸಮಾನತೆಯ ಹಕ್ಕು ನೀಡುವ ವಿಧಿ 14 ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ನೀಡುವ ವಿಧಿ 326ರ ನೇರ ಉಲ್ಲಂಘನೆಯಾಗಿದೆ. ದೇಹದಿಂದ ಆತ್ಮ ಬೇರ್ಪಡಿಸಿದಂತೆ ಮತದ ಹಕ್ಕು ಕಸಿದುಕೊಳ್ಳುವುದು ಎಂದು ಅವರು ಬಣ್ಣಿಸಿದ್ದು, ವ್ಯಕ್ತಿ ಮೃತಪಟ್ಟ ಪ್ರಕರಣ ಹೊರತುಪಡಿಸಿ ಪೂರ್ವಭಾವಿ ನೋಟಿಸ್ ಮತ್ತು ವಿಚಾರಣೆ ಇಲ್ಲದೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಂತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ, ಕೇಂದ್ರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಖರ್ಗೆ ಕರೆ
ನಮ್ಮ ದೇಶದಲ್ಲಿ ಕೋಟ್ಯಧಿಪತಿ ಮತ್ತು ರಿಕ್ಷಾ ಚಾಲಕನ ಮತಕ್ಕೆ ಒಂದೇ ಮೌಲ್ಯ ನೀಡುವುದೇ ಸಂವಿಧಾನ ಶಿಲ್ಪಿಗಳು ಸಾಮಾನ್ಯ ಪ್ರಜೆಯ ಮೇಲೆ ಇಟ್ಟ ನಂಬಿಕೆ, ಇದು ಸಂವಿಧಾನದ ಮೂಲ ರಚನೆಯ ಕೇಂದ್ರಬಿಂದು ಎಂದು ಉಜ್ಜಲ್ ಭುಯಾನ್ ಹೇಳಿದ್ದಾರೆ. ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕೋಟ್ಯಂತರ ಹೆಸರು ತೆಗೆಯಲಾಗಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪಿಸುತ್ತಿರುವ ಹೊತ್ತಿನಲ್ಲೇ ಈ ಹೇಳಿಕೆ ಬಂದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರ ಈ ಅಭಿಪ್ರಾಯ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಎಂಬುದು ತಾಂತ್ರಿಕ ಆಡಳಿತಾತ್ಮಕ ಕೆಲಸದಂತೆ ಕಂಡರೂ ಅದರ ಪರಿಣಾಮ ನೇರವಾಗಿ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ಆಗುತ್ತದೆ. ಮತದಾನದ ಹಕ್ಕು ಸರ್ಕಾರ ನೀಡುವ ಕೊಡುಗೆಯಲ್ಲ, ಅದು ಸಂವಿಧಾನದ ಮೂಲಕ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ ಸಿಕ್ಕಿರುವ ಹಕ್ಕು. ಹೀಗಾಗಿ ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಕ್ರಿಯೆಗೆ ಕಟ್ಟುನಿಟ್ಟಾದ ಕಾನೂನುಬದ್ಧ ಕಾರ್ಯವಿಧಾನ ಇರಲೇಬೇಕು. ಪೂರ್ವಭಾವಿ ನೋಟಿಸ್ ನೀಡದೆ, ಆಕ್ಷೇಪ ಸಲ್ಲಿಸಲು ಅವಕಾಶ ಕೊಡದೆ, ವಿಚಾರಣೆ ನಡೆಸದೆ ಸಾಮೂಹಿಕವಾಗಿ ಹೆಸರುಗಳನ್ನು ತೆಗೆಯುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ಕ್ರಮಗಳಿಂದ ಹೆಚ್ಚು ಬಾಧಿತರಾಗುವುದು ಸಮಾಜದ ಅಂಚಿನಲ್ಲಿರುವ ಬಡವರು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಅಲ್ಪಸಂಖ್ಯಾತರು ಮತ್ತು ಗ್ರಾಮೀಣ ಭಾಗದ ಜನರು. ಅವರ ಬಳಿ ದಾಖಲೆಗಳ ಕೊರತೆ ಇರುವುದನ್ನು ನೆಪವಾಗಿಟ್ಟುಕೊಂಡು ಮತದಾರರ ಪಟ್ಟಿಯಿಂದ ಹೊರಗಿಡುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೂ ವಿರುದ್ಧವಾಗಿದೆ.
ಹಲವು ರಾಜ್ಯಗಳಲ್ಲಿ ಈ ಹಿಂದೆ ಆಧಾರ್ ಸಂಖ್ಯೆ, ವಿಳಾಸ ವ್ಯತ್ಯಾಸ, ಹೆಸರಿನ ಕಾಗುಣಿತ ತಪ್ಪುಗಳ ಕಾರಣಕ್ಕೆ ಲಕ್ಷಾಂತರ ನಿಜವಾದ ಮತದಾರರು ಪಟ್ಟಿಯಿಂದ ಹೊರಗುಳಿದ ಉದಾಹರಣೆಗಳಿವೆ. ಚುನಾವಣಾ ಆಯೋಗ ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದರೂ ಅದರ ಪ್ರತಿಯೊಂದು ನಿರ್ಧಾರವೂ ಸಂವಿಧಾನದ 14 ಮತ್ತು 326 ನೇ ವಿಧಿಗಳಿಗೆ ಅನುಗುಣವಾಗಿರಬೇಕು. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯವೇ ಆದರೂ ಶುದ್ಧೀಕರಣದ ಹೆಸರಿನಲ್ಲಿ ಮತದಾನದಿಂದ ವಂಚಿತರನ್ನಾಗಿ ಮಾಡುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಪ್ರತಿ ಹೆಸರು ತೆಗೆಯುವಿಕೆಗೆ ಲಿಖಿತ ಕಾರಣ, ಸಂಬಂಧಪಟ್ಟ ವ್ಯಕ್ತಿಗೆ ವೈಯಕ್ತಿಕ ನೋಟಿಸ್, ಆಕ್ಷೇಪಣೆಗೆ ಕಾಲಾವಕಾಶ ಮತ್ತು ಮೇಲ್ಮನವಿ ಅವಕಾಶವನ್ನು ಕಡ್ಡಾಯಗೊಳಿಸಬೇಕು. ನ್ಯಾಯಾಂಗ ಇಂತಹ ಪ್ರಕ್ರಿಯೆಗಳ ಮೇಲೆ ನಿರಂತರ ನಿಗಾ ವಹಿಸುವುದು ಮತ್ತು ಅಗತ್ಯಬಿದ್ದಾಗ ಮಧ್ಯಪ್ರವೇಶಿಸುವುದು ನಾಗರಿಕರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ಅನಿವಾರ್ಯವಾಗಿದೆ. ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯನ್ನು ರಾಜಕೀಯ ಪ್ರೇರಿತ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಹೊತ್ತಿನಲ್ಲಿ ನ್ಯಾಯಮೂರ್ತಿಗಳ ಈ ನಿಲುವು ಸಾಂವಿಧಾನಿಕ ಚರ್ಚೆಗೆ ಹೊಸ ಆಯಾಮ ನೀಡಿದೆ.




