Photo Credits: @itstisyaai (Instagram), @filmystan.official (Instagram), @kannada_filmology (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಂಡಿದ್ದು, ಪ್ರಥಮಾರ್ಧಕ್ಕೆ (ಫಸ್ಟ್ ಹಾಫ್) ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಫಸ್ಟ್ ಹಾಫ್ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಚಿತ್ರವು ಹಾಲಿವುಡ್ ಮಟ್ಟದಲ್ಲಿದೆ ಎಂದು ಶ್ಲಾಘಿಸಿದ್ದಾರೆ.
ಹಾಲಿವುಡ್ ರೇಂಜ್ನಲ್ಲಿ ಫಸ್ಟ್ ಹಾಫ್
ಚಿತ್ರದ ಮೊದಲಾರ್ಧ ಅತ್ಯಂತ ರೋಮಾಂಚನಕಾರಿಯಾಗಿದ್ದು, ಆಕ್ಷನ್ ಹಾಗೂ ಮೇಕಿಂಗ್ನಲ್ಲಿ ‘ಟಾಕ್ಸಿಕ್’ ನೆಕ್ಸ್ಟ್ ಲೆವೆಲ್ನಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿಯೊಂದು ಫೈಟಿಂಗ್ ದೃಶ್ಯಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದ್ದು, ಯಶ್ ಅವರ ಮಾಸ್ ಎಂಟ್ರಿ ಮತ್ತು ಪ್ರಸೆಂಟ್ಸ್ ಅಭಿಮಾನಿಗಳನ್ನು ತುದಿಸೀಟಿನಲ್ಲಿ ಕೂರಿಸುವಂತೆ ಮಾಡಿದೆ.
ಫ್ಯಾಮಿಲಿ ಆಡಿಯೆನ್ಸ್ ಕೂಡ ನೋಡಬಹುದು
‘ಟಾಕ್ಸಿಕ್’ ಬರಿ ಮಾಸ್ ಸಿನಿಮಾ ಮಾತ್ರವಲ್ಲ, ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂಬ ಮಾತುಗಳು ಕೇಳಿಬರುತ್ತಿವೆ. ಯಶ್ ಅವರ ಲೇಡಿ ಫ್ಯಾನ್ಸ್ ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಈ ಚಿತ್ರವನ್ನು ಫ್ಯಾಮಿಲಿ ನೋಡೋಕೆ ಆಗಲ್ಲ ಅನ್ನೋದು ತಪ್ಪು, ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ನೋಡುವಂತೆ ಸಿನಿಮಾ ಮೂಡಿಬಂದಿದೆ” ಎಂದು ಹೇಳಿದ್ದಾರೆ.
ಅಕ್ಕನಿಗಾಗಿ ರಾಯನ ಮಾಸ್ ಅಖಾಡ
ಚಿತ್ರದಲ್ಲಿ ನಯನತಾರಾ ಹಾಗೂ ಯಶ್ ಅಕ್ಕ-ತಮ್ಮನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಎಂಟ್ರಿ ಸೀನ್ ಪ್ರೇಕ್ಷಕರಿಗೆ ಸಖತ್ ಥ್ರಿಲ್ ನೀಡಿದ್ದು, ಇಡೀ ಸಿನಿಮಾದ ಕಥೆ ಅಕ್ಕನಿಗಾಗಿ ತಮ್ಮ ‘ರಾಯ’ ನಡೆಸುವ ಹೋರಾಟದ ಸುತ್ತ ಸಾಗುತ್ತದೆ ಎಂಬ ಕುತೂಹಲಕಾರಿ ವಿಷಯವನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ.
ಸೆಕೆಂಡ್ ಹಾಫ್ ಮೇಲಿದೆ ಭಾರೀ ನಿರೀಕ್ಷೆ
ಫಸ್ಟ್ ಹಾಫ್ ಮೂಲಕವೇ ಪ್ರೇಕ್ಷಕರ ಮನ ಗೆದ್ದಿರುವ ‘ಟಾಕ್ಸಿಕ್’, ದ್ವಿತೀಯಾರ್ಧದ (ಸೆಕೆಂಡ್ ಹಾಫ್) ಮೇಲಿನ ಕುತೂಹಲವನ್ನು ಬೆಳೆಸಿದೆ. 3 ಗಂಟೆ 14 ನಿಮಿಷಗಳ ಸುದೀರ್ಘಾವಧಿಯ ಈ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಪ್ರೀ-ಕ್ಲೈಮ್ಯಾಕ್ಸ್ ದೃಶ್ಯಗಳು ಹೇಗಿರಲಿವೆ ಎಂಬ ತೀವ್ರ ನಿರೀಕ್ಷೆ ಎಲ್ಲರಲ್ಲಿದೆ. ದುಬೈ ಸೇರಿದಂತೆ ವಿದೇಶಗಳಲ್ಲಿ ಈಗಾಗಲೇ ಪ್ರೀಮಿಯರ್ ಶೋಗಳು ಮುಗಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಬ್ಲಾಕ್ ಬಸ್ಟರ್ ಟಾಕ್ ಹರಿದಾಡುತ್ತಿದೆ.




