ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೊಸ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಹೇಳಿರುವ ಮಾತು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಗೆ ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕ ಬದುಕಿನಲ್ಲಿ 30 ವರ್ಷಗಳ ಕಾಲ ನಿರಂತರ ದುಡಿದಿದ್ದೇನೆ, ಅನೇಕ ಏರಿಳಿತಗಳನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಿರಿಯರು ಈಗ ಮಾರ್ಗದರ್ಶಕರಾಗಿ ನಿಂತು ಯುವಕರಿಗೆ ಮುನ್ನಡೆಸಲು ಅವಕಾಶ ಕೊಡಬೇಕು ಎಂಬುದು ಅವರ ಮಾತಿನ ಸಾರವಾಗಿತ್ತು.
ಕೇಂದ್ರ ಸಂಪುಟ ಪುನಾರಚನೆಯ ಸುದ್ದಿಗಳು ಹರಿದಾಡುತ್ತಿರುವ ಹೊತ್ತಿನಲ್ಲೇ ಈ ಹೇಳಿಕೆ ಬಂದಿದ್ದರಿಂದ ಅವರು ರಾಜಕೀಯದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಕೋವಿಡ್ ನಂತರ ತಾವು ಅನುಸರಿಸುತ್ತಿರುವ ಶಿಸ್ತಿನ ಜೀವನ, ಯೋಗಾಭ್ಯಾಸದ ಬಗ್ಗೆ ಮಾತನಾಡಿದ ಗಡ್ಕರಿ, ಆರೋಗ್ಯ ಸರಿಯಿಲ್ಲದಿದ್ದರೆ ಹುದ್ದೆ, ಅಧಿಕಾರದಿಂದ ಯಾವುದೇ ಅರ್ಥವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ ಈ ಹೇಳಿಕೆ ರಾಜಕೀಯ ನಿವೃತ್ತಿಗೆ ಸಂಬಂಧಿಸಿದ್ದಲ್ಲ, ಅದು ಲಕ್ಷ್ಮಣರಾವ್ ಮಾನಕರ್ ಟ್ರಸ್ಟ್ ನ ಶಿಕ್ಷಣ ಸಂಬಂಧಿತ ಕಾರ್ಯಕ್ರಮದಲ್ಲಿ ಆಡಿದ ಸಾಮಾನ್ಯ ಮಾತು, ಅದನ್ನು ರಾಜಕೀಯಕ್ಕೆ ತಳುಕು ಹಾಕುವುದು ಬೇಡ ಎಂದು ಅವರ ಕಚೇರಿ ಸ್ಪಷ್ಟನೆ ನೀಡಿದೆ.
ಈ ಸ್ಪಷ್ಟನೆ ಬಂದರೂ ಚರ್ಚೆ ತಣ್ಣಗಾಗಿಲ್ಲ. ಗಡ್ಕರಿ ಅವರು ಬಿಜೆಪಿಯಲ್ಲೇ ವಿಭಿನ್ನ ಧ್ವನಿಯಾಗಿ ಗುರುತಿಸಿಕೊಂಡವರು. ಅಭಿವೃದ್ಧಿ, ಮೂಲಸೌಕರ್ಯ ವಿಚಾರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರೂ ಪಕ್ಷದೊಳಗಿನ ಕೆಲವು ನಿಲುವುಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಇಂತಹ ಸಂದರ್ಭದಲ್ಲಿ ಹೊಸ ಪೀಳಿಗೆಗೆ ಅವಕಾಶ ಕೊಡುವ ಮಾತು ಕೇವಲ ವೈಯಕ್ತಿಕ ಆರೋಗ್ಯದ ಕಾರಣಕ್ಕಷ್ಟೇ ಅಲ್ಲ, ರಾಜಕೀಯದಲ್ಲಿ ತಲೆಮಾರು ಬದಲಾವಣೆಯ ಅನಿವಾರ್ಯತೆಯ ಬಗ್ಗೆಯೂ ಅವರು ಪ್ರಸ್ತಾಪಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಈಗ ಸಂಪೂರ್ಣವಾಗಿ ಯುವ ನಾಯಕತ್ವ ಮತ್ತು ಹೊಸ ಮುಖಗಳತ್ತ ಹೊರಳುತ್ತಿರುವಾಗ ಗಡ್ಕರಿ ಅವರಂತಹ ಅನುಭವಿ ನಾಯಕರ ಈ ರೀತಿಯ ಹೇಳಿಕೆ ಮಹತ್ವ ಪಡೆಯುತ್ತದೆ. ಇದು ನಿವೃತ್ತಿಯ ಘೋಷಣೆಯಲ್ಲ, ಆದರೆ ಹಿರಿಯ ನಾಯಕರು ಸಕ್ರಿಯ ರಾಜಕಾರಣದಿಂದ ಹಂತ ಹಂತವಾಗಿ ಹಿಂದೆ ಸರಿದು ಸಲಹೆಗಾರರ ಪಾತ್ರಕ್ಕೆ ಬರುವ ಸಮಯದ ಬಗ್ಗೆ ಇಡೀ ವ್ಯವಸ್ಥೆಗೆ ಅವರು ನೀಡಿದ ಸಂದೇಶದಂತೆ ಕಾಣುತ್ತಿದೆ.




