Photo Credits: @ashwith_shetty_kodlady (Instagram)
ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸರ್ವೆ ನಡೆಯುತ್ತಿರುವ ಕಾರಣ ಹಣ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದ ಮಹಿಳೆಯರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
ಯೋಜನೆಯ ಬಾಕಿ ಉಳಿದಿರುವ ಕಂತಿನ ಹಣವನ್ನು ಇದೇ ತಿಂಗಳಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಅನರ್ಹರನ್ನು ಪತ್ತೆ ಹಚ್ಚಲು ಮನೆ ಮನೆ ಸರ್ವೆ ನಡೆಯುತ್ತಿದ್ದರೂ, ಹಣ ಬಿಡುಗಡೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳು ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮನೆಯಲ್ಲಿ ಇಲ್ಲದಿದ್ದರೂ ಹಣ ಕಟ್ ಆಗಲ್ಲ: ಪರಿಹಾರ ಇಲ್ಲಿದೆ
ಅನರ್ಹರನ್ನು ಯೋಜನೆಯಿಂದ ಹೊರಗಿಡಲು ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಣತಿದಾರರು ಬಂದಾಗ ಮನೆಯಲ್ಲಿ ಇಲ್ಲದಿದ್ದರೆ ಹೆಸರು ಡಿಲೀಟ್ ಆಗುತ್ತದೆ ಎಂಬ ಭಯ ಅರ್ಹ ಮಹಿಳೆಯರಿಗೆ ಅಗತ್ಯವಿಲ್ಲ.
ಬಾಗಿಲು ಹಾಕಿಕೊಂಡು ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದೆ. ಅಂತಹವರು ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಪಡಿತರ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಕೇಂದ್ರಗಳಲ್ಲಿ ಫೇಸ್ ಅಥಂಟಿಕೇಶನ್ ಮತ್ತು ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ. ಮರಣ ಹೊಂದಿದವರ ಅಥವಾ ಶಾಶ್ವತವಾಗಿ ವಲಸೆ ಹೋದವರ ಹೆಸರುಗಳನ್ನು ಮಾತ್ರ ಯೋಜನೆಯಿಂದ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.
ಸಮೀಕ್ಷೆಯ ವೇಳೆ ಯಾವೆಲ್ಲಾ ದಾಖಲೆಗಳನ್ನು ನೀಡಬೇಕು?
ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಫಲಾನುಭವಿಗಳು ಸಮೀಕ್ಷೆಯ ಸಮಯದಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ಗಣತಿದಾರರಿಗೆ ಒದಗಿಸುವುದು ಕಡ್ಡಾಯವಾಗಿದೆ.
ಗಣತಿದಾರರಿಂದ ಪಡೆದ ಭರ್ತಿ ಮಾಡಿದ ಅರ್ಜಿ ನಮೂನೆ, ಇತ್ತೀಚಿನ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕು. ಇದರೊಂದಿಗೆ ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸಬೇಕು.
ವೋಟರ್ ಐಡಿ, ಮೊಬೈಲ್ ನಂಬರ್ ಹಾಗೂ ಬಯೋಮೆಟ್ರಿಕ್ ನೀಡುವುದು ಅಗತ್ಯವಾಗಿದೆ. ಒಂದು ವೇಳೆ ಕುಟುಂಬದ ಸದಸ್ಯರು ಮೃತಪಟ್ಟಿದ್ದರೆ ಅಥವಾ ಸ್ಥಳಾಂತರಗೊಂಡಿದ್ದರೆ ಆ ಮಾಹಿತಿಯನ್ನು ಗಣತಿದಾರರಿಗೆ ಸ್ಪಷ್ಟವಾಗಿ ತಿಳಿಸಬೇಕಾಗಿದೆ.




