ಸಹಪಾಠಿ ಮೇಲೆ ಹಲ್ಲೆ ಆರೋಪ; ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸೇರಿ 5ರ ವಿರುದ್ಧ FIR

Assault and kidnaping allegation case FIR filed against Duniya Vijay's son Samrat

ಬೆಂಗಳೂರು: ಕಳೆದ ಎರಡು ದಿನಗಳಿಂದ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸುದ್ದಿಯಲ್ಲಿ ಇದ್ದಾರೆ. ತನ್ನ ಸಹಪಾಠಿಯ ಅಪಹರಣ ಹಾಗೂ ಹಲ್ಲೆ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದ ಮನೀಶ್ ಗೌಡ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR ದಾಖಲಾಗಿದೆ.

ನಿನ್ನೆ (ಸೆಪ್ಟೆಂಬರ್ 1) ಹಲ್ಲೆ ನಡೆದ ಬಳಿಕ ಮನೀಶ್ ಗೌಡ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸಾಮ್ರಾಟ್ ವಿಜಯ್ ವಿರುದ್ಧ ದೂರನ್ನು ದಾಖಲು ಮಾಡಲಾಗಿದೆ. ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಜೊತೆಗೆ ಕಿಡ್ನಾಪ್ ಹಾಗೂ ಹಲ್ಲೆ ಮಾಡಿದ್ದ ವಿಶ್ವಾಸ್ ಸುಚಿ, ಸಮೀದ್, ಸಮೃದ್ದ್ ಸಿಂಹ, ಸ್ಕಂದ ವೆಂಕಟೇಶ್ ವಿರುದ್ಧವೂ ಕೇಸ್ ದಾಖಲಾಗಿದೆ.

ಕೆಂಗೇರಿ ಪೊಲೀಸರು ಸಾಮ್ರಾಟ್ ವಿಜಯ್, ವಿಶ್ವಾಸ್ ಸುಚಿ, ಸಮೀದ್, ಸಮೃದ್ದ್ ಸಿಂಹ, ಸ್ಕಂದ ವೆಂಕಟೇಶ್ ವಿರುದ್ಧ ಸೆಕ್ಷನ್ 115(2), 118(1), 352, 351(2), 3(5), 137(2) ಅಡಿಯಲ್ಲಿ FIR ಅನ್ನು ದಾಖಲು ಮಾಡಲಾಗಿದೆ. ಈ ಬಗ್ಗೆ ಇದೂವರೆಗೂ ದುನಿಯಾ ವಿಜಯ್ ಹಾಗೂ ಪುತ್ರ ಸಾಮ್ರಾಟ್ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ದುನಿಯಾ ವಿಜಯ್ ಪುತ್ರ ಹಲ್ಲೆ-ಕಿಡ್ನಾಪ್ ಮಾಡಿದ್ದೇಕೆ?

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ಹಾಗೂ ಸಹಪಾಠಿ ಮನೀಶ್ ಗೌಡ ನಡುವೆ ಈ ಹಿಂದೆ ಚಿಕ್ಕದೊಂದು ಗಲಾಟೆ ನಡೆದಿತ್ತು. ಆ ವೇಳೆ ಇಬ್ಬರಿಗೂ ಸಂಧಾನ ಮಾಡಲಾಗಿತ್ತು. ಆದರೆ, ಆಗಸ್ಟ್ 31ರಂದು ಸಾಮ್ರಾಟ್ ಕಾರನ್ನು ಮನೀಶ್ ಗೌಡ ಹಾಗೂ ಅವರ ಸ್ನೇಹಿತರು ಓವರ್ ಟೇಕ್ ಮಾಡಿ ಗೇಲಿ ಮಾಡಿದ್ದರು ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದಿದ್ದ ಸಾಮ್ರಾಟ್ ವಿಜಯ್ ಕುಮಾರ್ ನಿನ್ನೆ (ಸೆಪ್ಟೆಂಬರ್ 1) ತನ್ನ ಸ್ನೇಹಿತರಾದ ವಿಶ್ವಾಸ್ ಸುಚಿ, ಸಮೀದ್, ಸಮೃದ್ದ್ ಸಿಂಹ, ಸ್ಕಂದ ವೆಂಕಟೇಶ್ ಅವರೊಂದಿಗೆ ಕಾಲೇಜ್ ಬಳಿ ತೆರಳಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಹಲ್ಲೆ ಮಾಡಿದ್ದಾರೆ. ಹೀಗೆಂದು ಮನೀಶ್ ಗೌಡ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸಾಮ್ರಾಟ್ ವಿರುದ್ಧ FIR ದಾಖಲಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.