Photo Credits: @ra_nagaravani (Instagram)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಸಮ್ಮತಿಸಿದ ಬೆನ್ನಲ್ಲೇ, ಆತನ ಸಾಕ್ಷ್ಯ ವಿಚಾರಣೆಗೆ ಅನುಮತಿ ನೀಡಬೇಕೆಂದು ಎಸ್‌ಪಿಪಿ ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ.
ಎಸ್‌ಪಿಪಿ ಸಲ್ಲಿಸಿರುವ ಈ ಅರ್ಜಿಯು ದರ್ಶನ್ ಅಂಡ್ ಗ್ಯಾಂಗ್‌ಗೆ ತೀವ್ರ ಆತಂಕವನ್ನುಂಟು ಮಾಡಿದೆ. 59ನೇ ಸೆಷನ್ಸ್ ಕೋರ್ಟ್‌ನಲ್ಲಿ ಈ ಮಹತ್ವದ ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರದೋಷ್ ನೀಡಲಿರುವ ಪ್ರತ್ಯಕ್ಷದರ್ಶಿ ಸಾಕ್ಷ್ಯವು ಇಡೀ ಪ್ರಕರಣದ ಗತಿಯನ್ನೇ ಬದಲಿಸುವ ಸಾಧ್ಯತೆಯಿದೆ.
ಸಾಕ್ಷ್ಯ ವಿಚಾರಣೆಗೆ ದರ್ಶನ್ ವಕೀಲರ ಪ್ರಬಲ ಆಕ್ಷೇಪ
ಎಸ್‌ಪಿಪಿ ಸಲ್ಲಿಸಿರುವ ಈ ಮನವಿಗೆ ದರ್ಶನ್ ಪರ ವಕೀಲರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಾಫಿ ಸಾಕ್ಷಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಿರುವ ಕಾರಣ, ಪ್ರದೋಷ್ ಸಾಕ್ಷ್ಯ ವಿಚಾರಣೆಯನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳಬಾರದು ಎಂದು ಕೋರಿಕೊಂಡಿದ್ದಾರೆ.
ಆದರೆ, ಪ್ರದೋಷ್ ಪರ ಹಿರಿಯ ವಕೀಲ ಕೆ.ದಿವಾಕರ್ ಅವರು ಶೀಘ್ರ ವಿಚಾರಣೆಗೆ ಒತ್ತಾಯಿಸಿದ್ದಾರೆ. ಪ್ರದೋಷ್ ತೀವ್ರ ಒತ್ತಡದಲ್ಲಿರುವುದರಿಂದ ಅವರ ಸಾಕ್ಷ್ಯ ವಿಚಾರಣೆ ತಕ್ಷಣವೇ ನಡೆಯಬೇಕಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
ಸಹ ಆರೋಪಿಗಳಿಗೆ ಆ ಬಳಿಕ ಪಾಟೀಸವಾಲು ನಡೆಸಲು ಕಾನೂನಿನಲ್ಲಿ ಅವಕಾಶ ದೊರೆಯಲಿದೆ ಎಂದು ಪ್ರದೋಷ್ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.
ಶೀಘ್ರವೇ ಸಾಕ್ಷ್ಯ ದಾಖಲು: ಡೆಡ್ಲಿ ಕೌಂಟ್‌ಡೌನ್ ಶುರು
ಪ್ರದೋಷ್ ಸಾಕ್ಷ್ಯ ವಿಚಾರಣೆ ಮುಂದೂಡಲು ದರ್ಶನ್ ಕಡೆಯವರಿಗೆ ಯಾವುದೇ ಹಕ್ಕಿಲ್ಲ ಎಂದು ವಾದಿಸಿರುವ ಪ್ರದೋಷ್ ವಕೀಲರು, ಆದಷ್ಟು ಬೇಗ ವಿಚಾರಣೆ ಮುಗಿಸಲು ಕೋರಿದ್ದಾರೆ.
ಕೋರ್ಟ್ ಮಾಫಿ ಸಾಕ್ಷಿ ಆದೇಶದ ಕಠಿಣ ಷರತ್ತುಗಳನ್ನು ಪ್ರದೋಷ್ ಗಮನಕ್ಕೆ ತಂದಿದೆ. ಸತ್ಯ ಮುಚ್ಚಿಟ್ಟರೆ ಅಥವಾ ಸುಳ್ಳು ಸಾಕ್ಷಿ ನೀಡಿದರೆ ಮತ್ತೆ ಆರೋಪಿಯನ್ನಾಗಿ ಪರಿಗಣಿಸುವುದಾಗಿ ಎಚ್ಚರಿಸಿದೆ.
ಪ್ರಸ್ತುತ ಕೋರ್ಟ್ 19ನೇ ಸಾಕ್ಷಿಯ ವಿಚಾರಣೆಯನ್ನು ನಡೆಸುತ್ತಿದ್ದು, ಶೀಘ್ರದಲ್ಲೇ ಪ್ರದೋಷ್ ಹೇಳಿಕೆ ದಾಖಲಾಗುವ ಸಾಧ್ಯತೆಯಿದೆ.




