ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾರೆ. ‘ಕಾಂತಾರ’ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ಕನ್ನಡಿಗ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಪ್ರತಿಷ್ಠಿತ ‘ಫೋರ್ಬ್ಸ್ ಇಂಡಿಯಾ’ ಬಿಡುಗಡೆ ಮಾಡಿರುವ ಭಾರತದ 100 ಅತೀ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ಬರಹಗಾರ ರಿಷಬ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಪೋರ್ಬ್ಸ್ ಇಂಡಿಯಾದ ಶೋಪಸ್ಟಾಪರ್ಸ್ 2026ನ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಟಾನ ಪಡೆದಿದ್ದು ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದಂತಾಗಿದೆ. ‘ಕಾಂತಾರ’ ಸಿನಿಮಾದ ಬಳಿಕ ಪ್ಯಾನ್-ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರೋ ರಿಷಬ್ ಶೆಟ್ಟಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಇದರೊಂದಿಗೆ ಅವರ ಸಿನಿಮಾಗಳ ಪ್ರಭಾವ ಕೂಡ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
ರಿಷಬ್ ಶೆಟ್ಟಿ ಕರಿಯರ್‌ಗೆ ಮತ್ತೊಂದು ಗರಿ
ಕನ್ನಡ ಚಿತ್ರರಂಗದಲ್ಲಿ ನಟ,ನಿರ್ದೇಶಕ ಹಾಗೂ ಬರಹಗಾರನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ ರಿಷಬ್ ಶೆಟ್ಟಿ ಎಂಬುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಎನಿಸಿದೆ. ಭಾರತದ ಬೇರೆ ಯಾವ ಭಾಷೆಯ ಸೆಲೆಬ್ರಿಟಿಯೂ ಮಾಡಿರದ ಇಂತಹ ಅದ್ಭುತ ಸಾಧನೆಯನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಾಡಿ ತೋರಿಸಿದ್ದಾರೆ. ಕನ್ನಡದ ನಟ ಫೋರ್ಬ್ಸ್ ಅಂತಹ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದು ಹೊಸ ದಾಖಲೆ ಬರೆದಿರೋದು ಚಿತ್ರರಂಗಕ್ಕೂ ಒಂದು ಹೆಮ್ಮೆ.
ಇದನ್ನು ಓದಿ: MAGICC SHORT FILM: ರಿಷಬ್ ಶೆಟ್ಟಿ ಹೊಸ ಸಾಹಸ; ಗಿಮಿಕ್ ಅಲ್ಲ, ಇದು ನಿಜವಾದ ‘ಮ್ಯಾಜಿಕ್’
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ‘ಕಾಂತಾರ: ಚಾಪ್ಟರ್ 1’
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಬಹುನಿರೀಕ್ಷಿತ ಕರಾವಳಿ ಸೊಗಡಿನ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು. ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದ ಸಿನಿಮಾ ಐದು ಭಾಷೆಗಳಿಂದ ಸುಮಾರು ₹800 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಈ ಮೂಲಕ 2025ರ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪ್ರಮುಖ ಭಾರತೀಯ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿತ್ತು.
ಇಷ್ಟೇ ಅಲ್ಲದೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ‘ಛಾವಾ’ದ ಬಾಕ್ಸಾಫೀಸ್ ಗಳಿಕೆಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿತ್ತು. ದೇಶಾದ್ಯಂತ ಅಬ್ಬರಿಸಿದ್ದಷ್ಟೇ ಅಲ್ಲದೇ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ ಈ ಸಿನಿಮಾ ಕೂಡ ಸೇರಿಕೊಂಡಿತ್ತು. ‘ಕಾಂತಾರ: ಚಾಪ್ಟರ್ 1’ ಬಳಿಕ ದೇಶಾದ್ಯಂತ ಇವರ ಜನಪ್ರಿಯತೆ ದುಪ್ಪಟ್ಟಾಗಿದ್ದು, ಬೇರೆ ಬೇರೆ ಭಾಷೆಗಳಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್‌ಗೆ ಗರಿ
ಸ್ಥಳೀಯ ಜನಪದ, ದೈವಾರಾಧನೆ ಮತ್ತು ಪ್ರಕೃತಿ-ಮಾನವನ ನಡುವಿನ ಸಂಘರ್ಷವನ್ನು ಅದ್ಭುತವಾಗಿ ತೆರೆಗೆ ತಂದಿದ್ದ ‘ಕಾಂತಾರ’ ಜಾಗತಿಕ ಮಟ್ಟದಲ್ಲಿ ವಿಮರ್ಶಕರ ಮೆಚ್ಚುಗೆ ಪಡೆದಿತ್ತು. ಅಲ್ಲದೇ ರಿಷಬ್ ಶೆಟ್ಟಿಯ ನಟನೆ ಹಾಗೂ ನಿರ್ದೇಶನವನ್ನು ಹೊಗಳಿ ಕೊಂಡಾಡಿದ್ದರು. ಈ ಮೂಲಕ ಭಾರತೀಯ ಕಲೆಯ ಸತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಥವಾಗಿ ಪ್ರತಿನಿಧಿಸಿದೆ ಎಂದೇ ಹೇಳಬಹುದು. ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಮತ್ತೊಂದು ಬಿಗ್ ಸಕ್ಸಸ್ ತಂದುಕೊಟ್ಟಿತ್ತು. ರಿಷಬ್ ಶೆಟ್ಟಿ ಅವರನ್ನು ಪ್ಯಾನ್-ಇಂಡಿಯಾ ಮಟ್ಟದ ಪ್ರಮುಖ ನಟ ಹಾಗೂ ನಿರ್ದೇಶಕರನ್ನಾಗಿ ಮಾಡಿದೆ.
ಸ್ಥಳೀಯ ಕಥೆಗಳನ್ನು ಜಾಗತಿಕ ಗುಣಮಟ್ಟದಲ್ಲಿ ಕಟ್ಟಿಕೊಡುವ ಮೂಲಕ ಕನ್ನಡಿಗರೊಬ್ಬರು ದೇಶದ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.




