Photo Credits: @nimma__updates (Instagram)
@prajwaldevraj_exclusiveupdates (Instagram)
ಥಿಯೇಟರ್ಗಳಲ್ಲಿ ಕಂಬಳ ಪ್ರಿಯರ ಮನಗೆದ್ದ ರಾಜ್ ಬಿ. ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಈಗ ಒಟಿಟಿಗೆ ಆಗಮಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದ್ದ ಈ ಚಿತ್ರ ಡಿಜಿಟಲ್ ವೇದಿಕೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ.
ಕರಾವಳಿಯ ಸಂಸ್ಕೃತಿ ಮತ್ತು ಜಿದ್ದಾಜಿದ್ದಿನ ಕಥಾಹಂದರ ಹೊಂದಿರುವ ಈ ರೋಮಾಂಚಕ ಚಿತ್ರವು ಆಗಸ್ಟ್ 28ರಿಂದ ‘ಕನ್ನಡ Zee5’ನಲ್ಲಿ ಪ್ರಸಾರವಾಗಲಿದೆ. ಒಟಿಟಿ ಬಿಡುಗಡೆಯು ಡಿಜಿಟಲ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹಾಗೂ ನಿರೀಕ್ಷೆಯನ್ನು ಮೂಡಿಸಿದೆ.
ಮಣ್ಣಿನ ಕಥೆ, ಪ್ರಾಣಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧ ಹಾಗೂ ಪ್ರತಿಷ್ಠೆಯ ಜಿದ್ದಾಜಿದ್ದಿನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಕಂಬಳ ಜಾನಪದ ಕ್ರೀಡೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಾಹಸಮಯ ಚಿತ್ರ ಈಗ ಮನೆಮನ ತಲುಪಲಿದೆ.
ಕರಾವಳಿ ಕಥಾಹಂದರ ಮತ್ತು ತಾರಾಗಣ…
‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕಥೆಗೆ ಜೀವ ತುಂಬಿದ್ದಾರೆ. ಹಾಸ್ಯ ನಟ ಮಿತ್ರ ಅವರು ಈ ಚಿತ್ರದಲ್ಲಿ ಗಂಭೀರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಸಂಭಾವನೆ ವಿವಾದ ಮತ್ತು ಟ್ರೇಲರ್ ಗಲಾಟೆ…
‘ಕರಾವಳಿ’ ಸಿನಿಮಾ ತೆರೆಕಾಣುವ ಸಮಯದಲ್ಲೇ ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕರ ನಡುವೆ ಸಂಭಾವನೆಯ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೂರಿತ್ತು. ಹಣದ ಕಿರಿಕ್ನಿಂದಾಗಿ ಪ್ರಜ್ವಲ್ ಡಬ್ಬಿಂಗ್ ಪೂರ್ಣಗೊಳಿಸಿಲ್ಲ ಎಂದು ಚಿತ್ರತಂಡ ಗಂಭೀರ ಆರೋಪ ಮಾಡಿತ್ತು. ಈ ನಡುವೆ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಗಲಾಟೆ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಾವೇರುವಂತೆ ಮಾಡಿತ್ತು.
ಆಗಸ್ಟ್ 28ರಿಂದ ‘ಜೀ5’ನಲ್ಲಿ ಸ್ಟ್ರೀಮಿಂಗ್…
ಪ್ರಸ್ತುತ ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಟ ಪ್ರಜ್ವಲ್ ದೇವರಾಜ್ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸರಣಿಯೇ ನಡೆದಿತ್ತು. ಈ ವಿವಾದದಿಂದ ಸಿನಿಮಾ ತಂಡ ಸಾಕಷ್ಟು ತೊಂದರೆ ಅನುಭವಿಸಿತ್ತು. ಇದರ ಜೊತೆಗೆ ಸಿನಿಮಾಗೆ ಭಾರಿ ಪ್ರಚಾರ ಕೂಡ ಸಿಕ್ಕಿತ್ತು. ಎಲ್ಲಾ ವಿವಾದಗಳ ನಡುವೆಯೂ ಯಶಸ್ವಿ ಪ್ರದರ್ಶನ ಕಂಡ ‘ಕರಾವಳಿ’ ಚಿತ್ರವನ್ನು ಆಗಸ್ಟ್ 28ರಿಂದ ‘ಜೀ5’ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.




