ಕಳೆದೆರಡು ದಿನಗಳಿಂದ ಬೆಂಗಳೂರಿನ ಪ್ರತಿಷ್ಠಿತ ಐಕಾನಿಂಗ್ ಚಿತ್ರಮಂದಿರ ‘ಊರ್ವಶಿ’ ಬಗ್ಗೆನೇ ಚರ್ಚೆಯಾಗುತ್ತಿದೆ. 1970 ರಿಂದ ಸಿನಿಮಾ ಪ್ರಿಯರಿಗೆ ಮನರಂಜನೆ ನೀಡುತ್ತಿದ್ದ ಈ ಚಿತ್ರಮಂದಿರ ಇದೂವರೆಗೂ ಸುಮಾರು ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆ ಸೇರಿದಂತೆ ಸುಮಾರು 5 ಸಾವಿರಕ್ಕೂ ಅಧಿಕ ಸಿನಿಮಾಗಳನ್ನು ಪ್ರದರ್ಶನ ಮಾಡಿದೆ. 55 ವರ್ಷಗಳಿಂದ ಸಿನಿಮಾ ಪ್ರದರ್ಶನ ಮಾಡುತ್ತಿದ್ದ ಊರ್ವಶಿ ಚಿತ್ರಮಂದಿರ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ.
ಕಳೆದ ಏಳೆಂಟು ವರ್ಷಗಳಿಂದ ಊರ್ವಶಿ ಚಿತ್ರಮಂದಿರವನ್ನು ನಡೆಸುತ್ತಿರುವ ಮಾಲೀಕರು ಹಾಗೂ ಭೂಮಾಲೀಕರ ನಡುವೆ ಕೋರ್ಟ್ ಕೇಸ್ ನಡೆಯುತ್ತಿತ್ತು. ಊರ್ವಶಿ ಚಿತ್ರಮಂದಿರಕ್ಕೆ ಭೂಮಾಲೀಕರು ನೀಡಿದ್ದ ಲೀಸ್ ಪೀರಿಯಡ್ ಮುಗಿದಿತ್ತು. ಹೀಗಾಗಿ ಊರ್ವಶಿ ಚಿತ್ರಮಂದಿರ ಮಾಲೀಕರು ಲೀಸ್ ಪೀರಿಯಡ್ ಅನ್ನು ಮುಂದುವರೆಸುವಂತೆ ಕೇಳಿದ್ದು. ಆದರು ಅದಕ್ಕೆ ಭೂಮಾಲೀಕರು ಒಪ್ಪಿರಲಿಲ್ಲ ಹೀಗಾಗಿ ಕೇಸ್ ನಡೆಯುತ್ತಲೇ ಇತ್ತು.
ಈ ಸಂಬಂಧ ಭೂಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಊರ್ವಶಿ ಚಿತ್ರಮಂದಿರದ ಮಾಲೀಕರಿಗೆ ಸೆಪ್ಟೆಂಬರ್ 30ರವರೆಗೂ ಗಡುವು ನೀಡಿದ್ದರು. ಅಷ್ಟರೊಳಗೆ ಭೂಮಾಲೀಕರು ಏಕಾಏಕಿ ಚಿತ್ರಮಂದಿರಕ್ಕೆ ನುಗ್ಗಿ ಆಸನಗಳು ಹಾಗೂ ಸ್ಕ್ರೀನ್ ಸೇರಿದಂತೆ ಚಿತ್ರಮಂದಿರಕ್ಕೆ ಹಾನಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಈಗ ಹೈಕೋರ್ಟ್ ಮಧ್ಯ ಪ್ರವೇಶಿಸಿ, ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಇದನ್ನು ಓದಿ: TOXIC MOVIE: ‘ಟಾಕ್ಸಿಕ್’ ಸೆಟ್ನಲ್ಲಿ ಯಶ್ ಹವಾ; ಫಿದಾ ಆದ ನಯನತಾರಾ
ಥಿಯೇಟರ್ ಮಾಲೀಕರ ಸಹಿಯನ್ನು ಪಡೆಯದೇ ಏಕಾಏಕಿ ನುಗ್ಗಿ ಹಾನಿ ಮಾಡಿದ್ದ ಆರೋಪವನ್ನು ಭೂಮಾಲೀಕರು ಎದುರಿಸುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಇರುವಾಗಲೇ ಥಿಯೇಟರ್ ಕೆಡವಲು ಮುಂದಾಗಿದ್ದು, ಸಿನಿಪ್ರಿಯರ ಆಕ್ರೋಶಕ್ಕೂ ಕಾರಣವಾಗಿತ್ತು. ಸದ್ಯ ಈ ಪ್ರಕರಣವೀಗ ಹೈಕೋರ್ಟ್ ಕಟಕಟೆಯಲ್ಲಿ ಇದೆ. ಊರ್ವಶಿ ಚಿತ್ರಮಂದಿರ ಪರವಾಗಿ ಹಿರಿಯ ವಕೀಲರಾದ ಶ್ಯಾಮ್ ಸುಂದರ ವಾದ ಮಾಡುತ್ತಿದ್ದಾರೆ.
ಇದೇ ವೇಳೆ ಊರ್ವಶಿ ಚಿತ್ರಮಂದಿರದ ವ್ಯವಸ್ಥಾಪಕರಾದ ಅನಂತು ಸೋಮವಾರ ನಡೆದ ಘಟನೆಯನ್ನು ವಿವರಿಸಿದ್ದಾರೆ. ಥಿಯೇಟರ್‌ನ ಆಸನಗಳು, ಸ್ಕ್ರೀನ್‌ಗಳನ್ನು ದ್ವಂಸ ಮಾಡುವುಕ್ಕೂ ಮುನ್ನ ಮಾಲೀಕರಿಂದ ಸಹಿ ತೆಗೆದುಕೊಳ್ಳಬೇಕಿತ್ತು. ಅಲ್ಲದೇ, ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ವರೆಗೂ ಗಡುವು ನೀಡುತ್ತಿತ್ತು. ಹೀಗಾಗಿ ಏಕಾಏಕಿ ಕಾನೂನು ಬಾಹಿರವಾಗಿ ಡೆಮಾಲಿಶ್ ಮಾಡುವ ಪ್ರಕ್ರಿಯೆಗೆ ಭೂಮಾಲಿಕರು ಮುಂದಾಗಿದ್ದರೆಂದು ಆರೋಪಿಸಲಾಗಿದೆ.
“ಸೆಪ್ಟೆಂಬರ್ 30ರ ವರೆಗೂ ಥಿಯೇಟರ್ ನಡೆಸಲು ಸುಪ್ರೀಂ ಕೋರ್ಟ್ ಅನುಮತಿಯನ್ನು ನೀಡಿತ್ತು. ಆದರೂ ಬೆಳ್ಳಂಬೆಳಗ್ಗೆ 200 ರಿಂದ 250 ಜನ ಏಕಾಏಕಿ ಥಿಯೇಟರ್‌ಗೆ ಬಂದಿದ್ದಾರೆ. ಥಿಯೇಟರ್‌ನಲ್ಲಿ ನಾವಿಬ್ಬರು ಇದ್ದೇವು. ಅವರು ಬಂದ ಕೂಡಲೇ ನಮಗೆ ಗಾಬರಿಯಾಗಿತ್ತು. ಥಿಯೇಟರ್‌ನ ಮಾಲೀಕರು ಇಲ್ಲ ಅಂದರೂ ಕೇಳದೆಯೇ ಒಳಗೆ ನುಗ್ಗಿದರು. ಹೀಗಾಗಿ ನಮಗೆ ಭಯ ಆಗಿತ್ತು. ಹೀಗಾಗಿ ನಾವು ಸುಮ್ಮನಾಗಿಬಿಟ್ವಿ. ಅವರು ಏಕಾಏಕಿ ಬಂದು ಸೀಟುಗಳನ್ನು ಕಿತ್ತಾಕಿದ್ದಾರೆ. ಸ್ಕ್ರೀನ್‌ಗಳನ್ನು ಕಿತ್ತಾಕಿದ್ದಾರೆ. ಸುಮಾರು ಡ್ಯಾಮೇಜ್ ಮಾಡಿ ಹಾಕಿದ್ದಾರೆ. ಓನರ್ ಸಹಿ ಹಾಕದೇನೆ ಹೀಗೆಲ್ಲ ಮಾಡಿದ್ದು ತಪ್ಪು. ಲ್ಯಾಂಡ್ ಲಾರ್ಡ್‌ಗಳಿಂದ ಸುಮಾರು ಜನರು ಬಂದಿದ್ದರು. ಅದೇ ರಾತ್ರಿ ಬಂದು ಥಿಯೇಟರ್‌ನಲ್ಲಿದ್ದ ಕ್ಯಾಶ್ ಅನ್ನೂ ತೆಗೆದುಕೊಂಡು ಹೋಗಿದ್ದಾರೆ. ಥಿಯೇಟರ್‌ಗೆ ಸಂಬಂಧಪಟ್ಟ ಹಣವನ್ನು ಮುಟ್ಟುವ ಅಧಿಕಾರ ಯಾರಿಗೂ ಇಲ್ಲ.” ಎಂದು ಆ ದಿನದ ಘಟನೆಯನ್ನು ಊರ್ವಶಿ ಥಿಯೇಟರ್‌ನ ಮ್ಯಾನೇಜರ್ ಅನಂತು ಕಲ್ಟ್ ಕನ್ನಡಕ್ಕೆ ವಿವರಿಸಿದ್ದಾರೆ.
ಥಿಯೇಟರ್‌ನಲ್ಲಿ ಇದ್ದ ಹಣವನ್ನು ಟ್ರೆಸ್ಟ್‌ಗೆ ಸಂಬಂಧಪಟ್ಟ ವ್ಯಕ್ತಿ ಮತ್ತು ಕೋರ್ಟ್ ಕಡೆಯಿಂದ ಬಂದ ವ್ಯಕ್ತಿ ಹಣವನ್ನು ತೆಗೆದುಕೊಂಡು ಹೊರಟಿದ್ದರು. ಆ ವೇಳೆ ಚಿತ್ರಮಂದಿರದ ಮಾಲೀಕರಾದ ಅಮಿತ್ ಗೌಡ ಗಮನಕ್ಕೆ ಬಂದಿತ್ತು. ಆಗ ಟ್ರೆಸ್ಟ್ ಮತ್ತು ಕೋರ್ಟ್ ಕಡೆಯಿಂದ ಬಂದ ವ್ಯಕ್ತಿ ನಡುವೆ ಮಾತಿ ಚಕಮಕಿ ನಡೆದಿತ್ತು. ಚಿತ್ರಮಂದಿರದ ಮಾಲೀಕರು ನಿಮಗೆ ಹಣ ತೆಗೆದುಕೊಂಡ ಹೋಗುವ ಅಧಿಕಾರವಿಲ್ಲ ಎಂದು ವಾದ ಮಾಡಿದ ಬಳಿಕ ಆ ಹಣವನ್ನು ಅವರಿಗೆ ಹಿಂತಿರುಗಿಸಿ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಬೆಳಗಿನಿಂದ ಸಂಜೆಯವರೆಗೆ ಇವರ ಗಮನಕ್ಕೆ ಬಾರದ ಬೇರೆ ಯಾವ್ಯಾವ ವಸ್ತುಗಳು ಕಾಣೆಯಾಗಿದೆಯೋ ಗೊತ್ತಿಲ್ಲ ಅನ್ನೋ ಸಂಶಯವನ್ನೂ ಹುಟ್ಟಾಕಿದೆ.
ಸದ್ಯ ಊರ್ವಶಿ ಚಿತ್ರಮಂದಿರವನ್ನು ಕೆಡವದಂತೆ ತಾತ್ಕಾಲಿಕವಾಗಿ ಹೈಕೋರ್ಟ್ ತಡೆ ನೀಡಿದೆ. ಆದರೆ, ಊರ್ವಶಿ ಚಿತ್ರಮಂದಿರಕ್ಕೆ ಹಾನಿ ಮಾಡಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿರುವ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಮತ್ತೆ ಚಿತ್ರಮಂದಿರವನ್ನು ಯತಾಸ್ಥಿತಿಗೆ ತರುವುದಕ್ಕೆ ಕಮ್ಮಿ ಅಂದರೂ 25 ದಿನಗಳು ಬೇಕಿದೆ. ಸ್ಕ್ರೀನ್ ರೆಡಿ ಮಾಡುವುದಕ್ಕೆ ಸುಮಾರು 25 ಲಕ್ಷ ರೂಪಾಯಿ ಅಷ್ಟು ವೆಚ್ಚ ತಗುಲುತ್ತೆ ಎನ್ನುತ್ತಾರೆ ಥಿಯೇಟರ್ ಸಿಬ್ಬಂದಿ.
ಅಲ್ಲದೆ ‘ಟಾಕ್ಸಿಕ್’ ಅಂತಹ ಪ್ಯಾನ್ ಇಂಡಿಯಾ ಸಿನಿಮಾ ಪ್ರದರ್ಶನ ಕಂಡಿದ್ದರೆ, ಮಾಲೀಕರಿಗೆ ಉತ್ತಮ ಲಾಭ ಆಗುತ್ತಿತ್ತು. ಯಾಕಂದ್ರೆ, ಇಲ್ಲಿಗೆ ಬಿಗ್ ಬಜೆಟ್ ಸಿನಿಮಾಗಳು ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿವೆ. ಅದರಲ್ಲೂ ಯಶ್ ನಟಿಸಿದ ‘ಕೆಜಿಎಫ್ 2’ ಸಿನಿಮಾ ಮೊದಲನೇ ವಾರ ಸುಮಾರು 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಾಗೇ ರಜನಿಕಾಂತ್ ಸಿನಿಮಾ ‘ಜೈಲರ್’ 60 ಲಕ್ಷ ಕಲೆಕ್ಷನ್ ಮಾಡಿದರೆ, ‘ಅವತಾರ್’ ಮೊದಲ ಅವತರಣಿಗೆ 60 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು.




