Photo Credits: @colorskannadaofficial (Instagram)
ಬಿಗ್ ಬಾಸ್ ಕನ್ನಡ 13 ರಿಯಾಲಿಟಿ ಶೋ ಆರಂಭವಾಗಿ ಇನ್ನೂ ಒಂದು ವಾರವೂ ಪೂರ್ಣಗೊಂಡಿಲ್ಲ. ಆದರೆ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಫೈಟಿಂಗ್ ಭರ್ಜರಿಯಾಗಿಯೇ ಆರಂಭವಾಗಿದೆ. ಟಾಸ್ಕ್ ವಿಚಾರವಾಗಿ ಗಗನ್ ಚಿನ್ನಪ್ಪ ಹಾಗೂ ಕಾಮನ್ ಮ್ಯಾನ್ ಸ್ಪರ್ಧಿ ಮಹಾಕವಿ ಮಂಜ್ಯಾ ನಡುವೆ ಜೋರು ಜಗಳ ನಡೆದಿದೆ.
ಈ ಹಿಂದೆ ಬಿಗ್ ಬಾಸ್ ಮಾದರಿಯ ಆಟ ಆಡಿದ ಅನುಭವ ಇರುವ ಗಗನ್ ಚಿನ್ನಪ್ಪ ಮನೆಯಲ್ಲಿ ಕೊಂಚ ಜೋರಾಗಿಯೇ ಆಟವಾಡುತ್ತಿದ್ದಾರೆ. ಇತ್ತ ಕಾಮನ್ ಮ್ಯಾನ್ ಕೋಟಾದಲ್ಲಿ ಬಂದಿರುವ ಮಹಾಕವಿ ಮಂಜ್ಯಾ ಅವರ ಶೈಲಿಯೇ ಬೇರೆಯಾಗಿದೆ.
ಹೀಗಾಗಿ ಇಬ್ಬರ ಆಲೋಚನೆಗಳು ಒಂದಾಗದೆ ಇಬ್ಬರ ನಡುವೆ ಕಿರಿಕ್ ಶುರುವಾಗಿದೆ. ಬಿಗ್ ಬಾಸ್ ನೀಡಿದ ಖಾರದ ಟಾಸ್ಕ್ ವೇಳೆ ಗಗನ್ ಹಾಗೂ ಮಂಜ್ಯಾ ನಡುವೆ ಮಾತಿಗೆ ಮಾತು ಬೆಳೆದು ಮನೆಯಲ್ಲಿ ತೀವ್ರ ಹಲ್‌ಚಲ್ ಎದ್ದಿದೆ.
ವಿಐಪಿ ಆದ ಗಗನ್: ವಿಮಾನದಲ್ಲಿದ್ದವರಿಗೆ ಭರ್ಜರಿ ಟಾಸ್ಕ್
ಡೈಮಂಡ್ ಬಾಕ್ಸ್ ರಹಸ್ಯದ ಆಟದಲ್ಲಿ ಗೆದ್ದು ವಿಐಪಿ ಆಗಿರುವ ಗಗನ್ ಚಿನ್ನಪ್ಪ ಅವರಿಗೆ ದೊಡ್ಮನೆಯಿಂದ ವಿಶೇಷ ಸೌಲಭ್ಯಗಳು ಸಿಕ್ಕಿವೆ. ಇತ್ತ ಆಟದಲ್ಲಿ ಸೋತ ಆಸಿಯಾ ಫಿರ್ದೋಸ್ ವಾಪಾಸ್ ವಿಮಾನ ಹತ್ತಿದ್ದಾರೆ. ಪ್ರಸ್ತುತ ದೊಡ್ಮನೆಯೊಳಗೆ 7 ಜನ ಹಾಗೂ ವಿಮಾನದಲ್ಲಿ 9 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.
ವಿಮಾನದಲ್ಲಿರುವ ಸ್ಪರ್ಧಿಗಳು ದೊಡ್ಮನೆಯೊಳಗೆ ಪ್ರವೇಶ ಪಡೆಯಲು ಬಿಗ್ ಬಾಸ್ ಕಠಿಣ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಆಟದಲ್ಲಿ ಸ್ಪರ್ಧಿಗಳು ಸಿಕ್ಕಾಪಟ್ಟೆ ಖಾರವಿರುವ ತಿಂಡಿಯನ್ನು ತಿನ್ನಬೇಕಾದ ಸವಾಲು ಎದುರಾಗಿದೆ.
ಖಾರ ತಡೆಯಲಾಗದೆ ಮಹಾಕವಿ ಮಂಜ್ಯಾ ಮುಖದಲ್ಲೇ ತೀವ್ರ ಕಷ್ಟ ಕಾಣಿಸುತ್ತಿತ್ತು. ಈ ವೇಳೆ ಧನುಷ್ ಮಂಜುನಾಥ್ ಅವರು ಮಂಜ್ಯಾನಿಗೆ ಬೆಂಬಲ ನೀಡಿ ಧೈರ್ಯ ತುಂಬುತ್ತಿರುವುದು ಪ್ರೋಮೋದಲ್ಲಿಯೂ ಅನಾವರಣಗೊಂಡಿದೆ.
ನೆತ್ತಿಗೇರಿದ ಸಿಟ್ಟು: ಥ್ರಿಲ್ಲಿಂಗ್ ಆಗಿದೆ ಈ ಬಾರಿಯ ಬಿಗ್ ಬಾಸ್
ಖಾರದ ಟಾಸ್ಕ್ ಆಡುವಾಗ ಮಹಾಕವಿ ಮಂಜ್ಯಾ ಸತತವಾಗಿ ಮಾತು ಆಡುತ್ತಲೇ ಇದ್ದರು. ಮಂಜ್ಯಾ ಅವರ ಈ ವರ್ತನೆಯಿಂದ ಗಗನ್ ಅವರ ಸಿಟ್ಟು ನೆತ್ತಿಗೇರಿದ್ದು, ಇಬ್ಬರ ನಡುವೆ ಬಿರುಸಿನ ಮಾತಿನ ಸಮರ ನಡೆದಿದೆ.
ಈ ಬಾರಿಯ ಬಿಗ್ ಬಾಸ್ ಆಟದ ಶೈಲಿ ಹಾಗೂ ವಿಮಾನಯಾನದ ಥೀಮ್ ವಿಭಿನ್ನವಾಗಿ ಮೂಡಿಬಂದಿದೆ. ಮನೆ ಒಳಗೆ ಹೋದವರು ವಾಪಾಸ್ ವಿಮಾನ ಹತ್ತುವ ಭಯದಲ್ಲಿದ್ದರೆ, ವಿಮಾನದಲ್ಲಿರುವವರು ಮನೆಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.
ಮೊದಲ ದಿನದಿಂದಲೇ ಕಠಿಣ ಟಾಸ್ಕ್‌ಗಳು ಶುರುವಾಗಿರುವುದರಿಂದ ಈ ಬಾರಿಯ ಸೀಸನ್ ನೋಡುಗರಿಗೆ ಭಾರಿ ಥ್ರಿಲ್ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಈ ಜಗಳ ಇನ್ನ್ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.




