Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಅತ್ಯಂತ ಪ್ರಮುಖ ಬೆಳವಣಿಗೆಯೊಂದು ನಡೆಯುತ್ತಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ ಕೋರ್ಟ್‌ನಲ್ಲಿ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲಿದ್ದಾರೆ. ಪ್ರದೋಷ್ ನೀಡುವ ಈ ಹೇಳಿಕೆಯಿಂದ ಇಡೀ ಡಿ-ಗ್ಯಾಂಗ್‌ಗೆ ಆತಂಕ ಎದುರಾಗಿದೆ.
ಪ್ರದೋಷ್ ಮಾಫಿ ಸಾಕ್ಷಿ ಹೇಳದಂತೆ ತಡೆಯಲು ದರ್ಶನ್ ಪರ ವಕೀಲರು ಸಾಕಷ್ಟು ಕಸರತ್ತು ನಡೆಸಿದ್ದರು. ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿ ವಾದ ಮಾಡಿದ್ದರು. ಆದರೆ ಈ ಯಾವುದೇ ಪ್ರಯತ್ನಗಳು ಫಲ ನೀಡಿಲ್ಲ.
ಈಗ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮುಂದಿನ ಕಾನೂನು ಹೋರಾಟದ ಬಗ್ಗೆ ಚಿಂತೆಯಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ದಾರಿ ಇದೆಯಾ ಎಂಬ ಹುಡುಕಾಟದಲ್ಲಿದ್ದಾರೆ. ಆದರೆ ಪ್ರದೋಷ್ ಹೇಳಿಕೆಯಿಂದ ಕೇಸ್ ಯಾವ ಕಡೆ ತಿರುಗಲಿದೆಯೋ ಎಂಬ ಭಯ ಶುರುವಾಗಿದೆ.
ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಪ್ರಕ್ರಿಯೆ ಹೇಗಿರುತ್ತೆ?
ಇಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರದೋಷ್ ಅವರನ್ನು ಕೋರ್ಟ್‌ಗೆ ಕರೆತರಲಾಗುತ್ತದೆ. ನ್ಯಾಯಾಧೀಶರ ಮುಂದೆ ಬೋನಿನಲ್ಲಿ ನಿಲ್ಲಿಸಿ ವಿಚಾರಣೆ ಆರಂಭಿಸಲಾಗುತ್ತದೆ.
ಇದನ್ನು ಓದಿ: Darshan Case: ಇಡೀ ಪ್ರಕರಣಕ್ಕೆ ಸಿಗಲಿದೆ ಬಿಗ್ ಟ್ವಿಸ್ಟ್; ಪ್ರದೋಷ್ ವಿಚಾರಣೆಗೆ ಕ್ಷಣಗಣನೆ ಆರಂಭ
ಮೊದಲು ಸತ್ಯವನ್ನೇ ಹೇಳುತ್ತೇನೆ ಎಂದು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿಸಲಾಗುತ್ತದೆ. ನಂತರ ಘಟನೆ ದಿನ ಏನೇನು ನಡೆಯಿತು ಎಂಬುದನ್ನು ಪ್ರದೋಷ್ ಸಂಪೂರ್ಣವಾಗಿ ವಿವರಿಸಲಿದ್ದಾರೆ.
ಈಗಾಗಲೇ ಸಲ್ಲಿಸಲಾಗಿರುವ 11 ಪುಟಗಳ ಅರ್ಜಿಯ ಅಂಶಗಳನ್ನು ಪ್ರದೋಷ್ ಕೋರ್ಟ್ ಮುಂದೆ ವಿವರಣೆ ನೀಡಲಿದ್ದಾರೆ. ಬಳಿಕ ಕೋರ್ಟ್ ಈ ಅಧಿಕೃತ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ.
Darshan Case: ಪ್ರಾಸಿಕ್ಯೂಷನ್ ಪರಿಶೀಲನೆ ಹಾಗೂ ಕ್ರಾಸ್ ಎಕ್ಸಾಮಿನೇಷನ್
ಕೋರ್ಟ್ ಹೇಳಿಕೆ ದಾಖಲಿಸಿಕೊಂಡ ನಂತರ, ಪ್ರಾಸಿಕ್ಯೂಷನ್ ತಂಡ ಆ ಹೇಳಿಕೆ ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತದೆ. 59ನೇ ಸಿಸಿಎಚ್ ಕೋರ್ಟ್ ಜಡ್ಜ್ ಸುಜಾತ ಸಾಂಬ್ರಾಣಿ ಅವರ ಮುಂದೆ ಪ್ರದೋಷ್ ಹೇಳಿಕೆ ನೀಡಲಿದ್ದಾರೆ.
ಒಂದು ವೇಳೆ ನೀಡಿದ ಹೇಳಿಕೆ ಸುಳ್ಳು ಎಂದು ಎಸ್‌ಪಿಪಿಗೆ ಅನಿಸಿದರೆ ಅದನ್ನು ತಿರಸ್ಕರಿಸುವ ಅಧಿಕಾರವೂ ಇರುತ್ತದೆ. ಹಾಗಿಗಿದ್ದರೆ ಪ್ರದೋಷ್ ಮತ್ತೆ ಆರೋಪಿಯಾಗಿಯೇ ಉಳಿಯಲಿದ್ದಾರೆ.
ಹೇಳಿಕೆ ದಾಖಲಾದ ನಂತರ ಆರೋಪಿಗಳ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್‌ಗೆ ಸಮಯ ಕೇಳಲಿದ್ದಾರೆ. ಮುಂದಿನ ಕ್ರಾಸ್ ಎಕ್ಸಾಮಿನ್ ವೇಳೆ ನಟ ದರ್ಶನ್ ಕೂಡ ಕೋರ್ಟ್‌ನಲ್ಲಿ ಖುದ್ದು ಹಾಜರಿರಬೇಕಾಗುತ್ತದೆ. ಪ್ರದೋಷ್ ನೀಡುವ ಈ ಮಾಫಿ ಸಾಕ್ಷಿ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಲಿದೆ.




