☔ Weather
Bengaluru: ☁️ 25°C | AQI 51
Mysore: 🌧️ 25°C | AQI 51
Mangalore: ⛈️ 32°C | AQI 87
Bengaluru: ☁️ 25°C | AQI 51

MALLIKARJUNA KHARGE : ಅಸ್ಪೃಶ್ಯತೆ ಹೋಗದಿದ್ದರೆ ಹಿಂದೂ ಧರ್ಮ ಉಳಿಯಲ್ಲ – ಕಲಬುರಗಿಯಲ್ಲಿ ಖರ್ಗೆ ಕಿಡಿ

Image of Mallikarjuna kharge

ಕಲಬುರಗಿ : ಅಸ್ಪೃಶ್ಯತೆಯಿಂದಲೇ ಹಿಂದೂ ಧರ್ಮ ಅಳಿಯಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಎಚ್ಚರಿಕೆ ನೀಡಿದ್ದಾರೆ. ಕಲಬುರಗಿಯ ಬುದ್ಧ ವಿಹಾರದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಆಯೋಜಿಸಿದ್ದ ವಿಜಯದಶಮಿ ಅಂಗದ 70ನೇ ಧಮ್ಮಚಕ್ರ ಪ್ರವರ್ತನ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಜಾತಿ ಭೇದ ಹಾಗೂ ಅಸ್ಪೃಶ್ಯತೆ ಇದೇ ರೀತಿ ಮುಂದುವರಿದರೆ ಹಿಂದೂ ಧರ್ಮ ಅಳಿವಿನತ್ತ ಸಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿಂದೂ ಧರ್ಮದೊಳಗಿನ ಅನ್ಯಾಯವನ್ನು ಸರಿಪಡಿಸಲು ಆಗದೇ ಹೋದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು 1935ರಲ್ಲೇ ತಾವು ಹಿಂದೂವಾಗಿ ಜನಿಸಿದ್ದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿದ್ದನ್ನು ಖರ್ಗೆ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಅಸ್ಪೃಶ್ಯತೆಯ ಚಿಂತನೆ ಅತ್ಯಂತ ಹೇಯ ಕೃತ್ಯ..!

ದೇಶದಲ್ಲಿ ಇಂದಿಗೂ ಜಾತಿ ಪದ್ಧತಿ ಸಂಪೂರ್ಣವಾಗಿ ಮಾಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಖರ್ಗೆ ತಮ್ಮ ಜೀವನದಲ್ಲೇ ನಡೆದ ಘಟನೆಯನ್ನು ಉದಾಹರಣೆಯಾಗಿ ನೀಡಿದರು. ಉತ್ತರಾಖಂಡದಲ್ಲಿ ತಾವು ಭಾಷಣ ಮಾಡಿ ಬಂದ ಎರಡು ದಿನಗಳ ಬಳಿಕ ತಾವು ನಿಂತಿದ್ದ ಜಾಗವನ್ನು ತೊಳೆದು ಸ್ವಚ್ಛಗೊಳಿಸಲಾಯಿತು ಎಂದು ಹೇಳಿದ ಅವರು ಭಾಷಣ ಮುಗಿದ ಕೂಡಲೇ ತೊಳೆದಿದ್ದರೆ ಕೊಳಕು ತೊಳೆಯುತ್ತಿದ್ದಾರೆ ಎಂದು ಭಾವಿಸಬಹುದಿತ್ತು, ಆದರೆ ಎರಡು ದಿನಗಳ ನಂತರ ತೊಳೆಯುವುದು ಎಂಥ ಮೂಢನಂಬಿಕೆ ಮತ್ತು ಮಾನಸಿಕ ಕಿರುಕುಳ ಎಂದು ಪ್ರಶ್ನಿಸಿದರು. ಮಾರ್ಟಿನ್ ಅಥವಾ ಮೊಹಮ್ಮದ್ ಅವರನ್ನು ಮನೆಗೆ ಕರೆಯುವ ಜನರು ಮಲ್ಲಿಕಾರ್ಜುನನನ್ನು ಏಕೆ ಕರೆಯುವುದಿಲ್ಲ, ನಮ್ಮ ಜನರನ್ನು ಏಕೆ ದೂರವಿಡುತ್ತೀರಿ, ಕುಡಿಯಲು ನೀರು ಹಾಗೂ ಕಲಿಯಲು ಶಿಕ್ಷಣ ಕೊಡುವುದಿಲ್ಲ, ನಾವೇನು ಮನುಷ್ಯರಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಧರ್ಮದ ಹೆಸರಿನಲ್ಲಿ ಜನರನ್ನು ಗುಲಾಮಗಿರಿಗೆ ತಳ್ಳಲಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬುದ್ಧ ಧರ್ಮದ ಮೂಲಕ ಮುಕ್ತಿಯ ಮಾರ್ಗ ತೋರಿಸಿದರು. ವಿದೇಶಿ ಮೂಲದ ಧರ್ಮ ಸ್ವೀಕರಿಸಿದರೆ ದೇಶದ ಏಕತೆಗೆ ಹಾನಿಯಾಗಬಹುದು ಎಂಬ ದೂರದೃಷ್ಟಿಯಿಂದಲೇ ಭಾರತದ ಸನಾತನ ಮತ್ತು ಪ್ರಾಚೀನ ಧರ್ಮವಾದ ಬೌದ್ಧ ಧರ್ಮವನ್ನು ಅವರು ಆಯ್ಕೆ ಮಾಡಿಕೊಂಡರು ಎಂದು ಖರ್ಗೆ ವಿವರಿಸಿದರು.

ಇದನ್ನೂ ಓದಿ : ಜಂಬೂಸವಾರಿಗೆ ಸಿದ್ದು ಗೈರು – ಸ್ಟಿಂಗ್ ಹಿಂದೆ ಪಿತೂರಿ ಇದೆ ಎಂದ ಯತೀಂದ್ರ..!

ಒಂದು ಧರ್ಮದ ಒಳಗೇ ಮನುಷ್ಯರನ್ನು ಮೇಲು ಕೀಳು ಎಂದು ವಿಂಗಡಿಸುವುದು ಆ ಧರ್ಮದ ಬುನಾದಿಯನ್ನೇ ದುರ್ಬಲಗೊಳಿಸುತ್ತದೆ ಎಂಬುದು ಖರ್ಗೆ ಅವರ ಮಾತಿನ ಸಂದೇಶವಾಗಿದೆ. ಹೊರಗಿನವರಿಂದ ಧರ್ಮಕ್ಕೆ ಅಪಾಯ ಬರುವುದಕ್ಕಿಂತ ಒಳಗಿನ ತಾರತಮ್ಯವೇ ಹೆಚ್ಚು ಅಪಾಯಕಾರಿ ಎಂಬ ವಾದವನ್ನು ಈ ಹೇಳಿಕೆ ಮುಂದಿಡುತ್ತದೆ. ಇಂದಿಗೂ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗೆ ನಡೆದ ಅನುಭವವೇ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ತೋರಿಸುತ್ತದೆ. ಅಸ್ಪೃಶ್ಯತೆ ಕೇವಲ ಹಳೆಯ ಕಾಲದ ಆಚರಣೆಯಲ್ಲ, ಅದು ಈಗಲೂ ಮನಸ್ಸಿನಲ್ಲಿರುವ ಅಸಮಾನತೆಯ ಪ್ರತಿಬಿಂಬವಾಗಿದೆ. ಸಮಾನತೆ, ಮಾನವೀಯತೆ ಮತ್ತು ಗೌರವವನ್ನು ಎಲ್ಲರಿಗೂ ಖಾತ್ರಿ ಮಾಡದಿದ್ದರೆ ಯಾವುದೇ ಧರ್ಮ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಆಯ್ಕೆ ಮಾಡಿದ್ದು ಧರ್ಮವನ್ನು ತೊರೆಯುವ ಉದ್ದೇಶದಿಂದಲ್ಲ, ಬದಲಿಗೆ ಸಮಾನತೆಯ ಹೊಸ ಮಾರ್ಗವನ್ನು ಹುಡುಕುವ ಪ್ರಯತ್ನವಾಗಿತ್ತು.