ನವದೆಹಲಿ: ಮುಂದಿನ 30 ವರ್ಷಗಳವರೆಗೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಭವಿಷ್ಯ ನುಡಿದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿದ ಅವರು, ರಾಜಧಾನಿಯಲ್ಲಿ ನಡೆಸುವ ಪ್ರತಿಭಟನೆಗಳಿಂದ ಮತದಾರರು ನೀಡಿದ ತೀರ್ಪನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ಯಮುನಾ ನದಿಯನ್ನು ಪುನರುಜ್ಜೀವನಗೊಳಿಸುವ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ವೇಳೆ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಿಂದ ಪ್ರಧಾನಿ ಅವರವರೆಗೆ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಮತಗಳ್ಳತನದ ಆರೋಪ ಮಾಡುತ್ತಿರುವ ಬಗ್ಗೆಯೂ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ದ್ವಂದ್ವ ನಿಲುವು ಜನರ ಮುಂದೆ ನಡೆಯುವುದಿಲ್ಲ..!
ನ್ಯಾಯಾಲಯಗಳ ತೀರ್ಪು ತಮ್ಮ ಪರ ಬಂದಾಗ ಅದನ್ನು ನ್ಯಾಯಸಮ್ಮತ ಎಂದು ಒಪ್ಪಿಕೊಳ್ಳುವ ಕಾಂಗ್ರೆಸ್, ವಿರುದ್ಧವಾಗಿ ಬಂದಾಗ ಅದನ್ನೇ ಪ್ರಶ್ನಿಸುತ್ತದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಈ ದ್ವಂದ್ವ ನಿಲುವು ಜನರ ಮುಂದೆ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಯಮುನಾ ಮಾಲಿನ್ಯದ ವಿಚಾರದಲ್ಲೂ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಸರ್ಕಾರಗಳನ್ನು ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಈ ಪಕ್ಷಗಳ ಆಡಳಿತದಲ್ಲಿ ನದಿಗೆ ಕೊಳಚೆ ನೀರು ಹರಿದು ಬರುತ್ತಿದೆ ಎಂದು ಆರೋಪಿಸಿದ ಅವರು, ಪ್ರತಿದಿನ ಸುಮಾರು 2,000 ಟನ್ ತ್ಯಾಜ್ಯ ನದಿ ಸೇರುತ್ತಿತ್ತು ಎಂದು ತಿಳಿಸಿದ್ದಾರೆ. ಹರಿಯಾಣದಿಂದ ಬರುವ ಕೈಗಾರಿಕಾ ತ್ಯಾಜ್ಯ ಮತ್ತು ಉತ್ತರ ಪ್ರದೇಶದಿಂದ ಹರಿದು ಬರುವ ಕಲುಷಿತ ನೀರು ಕೂಡ ಮಾಲಿನ್ಯ ಹೆಚ್ಚಿಸಿವೆ ಎಂದು ಹೇಳಿದ್ದಾರೆ. ಪ್ರಸ್ತುತ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಸಮನ್ವಯದಿಂದ ಕೆಲಸ ಮಾಡಿ 2029ರ ವೇಳೆಗೆ ಸ್ವಚ್ಛ ಯಮುನೆಯನ್ನು ಜನರಿಗೆ ನೀಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಮುನಾ ಸ್ವಚ್ಛತೆಗೆ ಶ್ರಮಿಸುತ್ತಿರುವ ಲೆಫ್ಟಿನೆಂಟ್ ಗವರ್ನರ್, ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಚಿವ ಪ್ರವೇಶ್ ವರ್ಮಾ ಅವರನ್ನು ಶ್ಲಾಘಿಸಿದ ಶಾ, ಇದು ಪ್ರಧಾನಿ ಮೋದಿ ಅವರ ಕನಸನ್ನು ನನಸು ಮಾಡಲಿದೆ ಎಂದಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತದಲ್ಲಿ ಮಾದಕ ವಸ್ತುಗಳ ದಂಧೆ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಜನರು ಎನ್‌ಡಿಎ ಸರ್ಕಾರವನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ದೆಹಲಿ ಚುನಾವಣೆಯಲ್ಲಿ ಸೋತ ಬಳಿಕ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನತ್ತ ಗಮನ ಹರಿಸಿ ಅಲ್ಲಿನ ಮುಖ್ಯಮಂತ್ರಿಯ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಟೀಕಿಸಿದ ಶಾ, 2029ರೊಳಗೆ ಪಂಜಾಬ್‌ನಲ್ಲಿ ಮಾದಕ ವಸ್ತುಗಳ ದಂಧೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಮತ್ತೊಂದು ಸುತ್ತಿನ ಪ್ರೊಟೆಸ್ಟ್ ಕಾಂಗ್ರೆಸ್ ಸಜ್ಜು – ನ.1 ರಿಂದ ಬೃಹತ್ ಪ್ರತಿಭಟನೆಗೆ ಪ್ಲಾನ್..!
ಈ ಹೇಳಿಕೆಗಳು ಕೇವಲ ಯಮುನಾ ಸ್ವಚ್ಛತಾ ಕಾರ್ಯಕ್ರಮದ ವೇದಿಕೆಯಲ್ಲಿ ನೀಡಿದ ಭಾಷಣವಾಗಿ ಕಾಣುತ್ತಿಲ್ಲ, ಬದಲಿಗೆ ಮುಂಬರುವ ಚುನಾವಣೆಗಳಿಗೆ ಬಿಜೆಪಿ ಮಾಡುತ್ತಿರುವ ರಾಜಕೀಯ ಸಿದ್ಧತೆಯ ಸಂಕೇತವಾಗಿ ಕಾಣುತ್ತಿವೆ. ಕಾಂಗ್ರೆಸ್ ಅನ್ನು ಮೂರು ದಶಕಗಳ ಕಾಲ ಅಧಿಕಾರದಿಂದ ದೂರ ಇಡುವ ಮಾತುಗಳು, ವಿರೋಧ ಪಕ್ಷದ ವಿಶ್ವಾಸವನ್ನು ಕುಗ್ಗಿಸಿ ತಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ತಂತ್ರವಾಗಿರಬಹುದು. ಮತಗಳ್ಳತನ, ನ್ಯಾಯಾಲಯದ ತೀರ್ಪು ಮತ್ತು ಪ್ರತಿಭಟನೆ ವಿಚಾರಗಳನ್ನು ಒಟ್ಟಿಗೆ ಪ್ರಸ್ತಾಪಿಸುವ ಮೂಲಕ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಪ್ರಯತ್ನ ನಡೆದಿದೆ. ಅದೇ ರೀತಿ ಯಮುನಾ ಮಾಲಿನ್ಯ ಮತ್ತು ಪಂಜಾಬ್‌ನ ಮಾದಕ ವಸ್ತು ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಮ್ ಆದ್ಮಿ ಪಕ್ಷದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುವ ಮೂಲಕ ದೆಹಲಿ ಮತ್ತು ಪಂಜಾಬ್‌ನ ಮತದಾರರಲ್ಲಿ ಬಿಜೆಪಿ ಪರವಾದ ಅಭಿಪ್ರಾಯ ಮೂಡಿಸುವ ಲೆಕ್ಕಾಚಾರವೂ ಇದೆ. ಆದರೆ 2029ರ ಗುರಿ ಮತ್ತು ಸ್ವಚ್ಛ ಯಮುನೆಯ ಭರವಸೆ ನಿಜವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕೆಲಸಗಳ ಮೇಲೆ ಅವಲಂಬಿತವಾಗಲಿದೆ.




