ಸುದೀಪ್ (Kichcha Sudeepa) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಬಹಳ ಕಡಿಮೆ. ಆದರೆ ಇತ್ತೀಚೆಗೆ ಬಿಗ್ಬಾಸ್ ವೇದಿಕೆಯಲ್ಲಿ ವೈಯಕ್ತಿಕ ಜೀವನದ ಬಗ್ಗೆಯೂ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಕಳೆದ ಸೀಸನ್ನಲ್ಲಿ ಪ್ರಿಯಾ ಸುದೀಪ್ ಅವರು ವೇದಿಕೆಗೆ ಬಂದಿದ್ದರು. ಸುದೀಪ್ ಅವರು ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದರು. ನಿನ್ನೆ (ಭಾನುವಾರ)ಯ ಸಂಚಿಕೆಯಲ್ಲಿ ಸುದೀಪ್ ಅವರು ತಮ್ಮ ತಂದೆ ಸಂಜೀಯ್ಯನವರ ಬಗ್ಗೆ ಮಾತನಾಡಿದರು. ಎಲ್ಲೂ ಹೇಳಿಕೊಳ್ಳದ, ಯಾರಿಗೂ ಗೊತ್ತಿಲ್ಲದ ಕೆಲವು ವಿಷಯಗಳನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು.
ಸುದೀಪ್ ಅವರು ಚಿತ್ರರಂಗದಲ್ಲಿ ಮೂವತ್ತು ವರ್ಷ ಪೂರೈಸಿದ್ದಕ್ಕಾಗಿ ಅವರ ತಂದೆ ಸಂಜೀವಯ್ಯನವರು ಮಗನಿಗೆ ವಿಶೇಷ ಪತ್ರ ಬರೆದಿದ್ದರು. ಪತ್ರದಲ್ಲಿ, ‘ನಾನು ಹಾಗೂ ನಿನ್ನ ತಾಯಿ ಹೆಮ್ಮೆ ಪಡುವಂಥಹಾ ಕೆಲಸಗಳನ್ನು ಮಾಡಿದ್ದೀಯ’ ಎಂದು ಕೊಂಡಾಡಿದರು. ಸುದೀಪ್ ಅವರು ಸಹ ತಂದೆಯ ಪತ್ರ ಮತ್ತು ಅವರ ಧ್ವನಿ ಕೇಳಿ ತುಸು ಭಾವುಕರಾದರು.
ಬಳಿಕ ಮಾತನಾಡಿದ ಕಿಚ್ಚ, ‘ನನ್ನ ತಂದೆಯ ಮುಂದೆ ನಾನು ಏನೂ ಅಲ್ಲ. ಅವರು ಬಹಳ ಅದ್ಭುತವಾದ ನಟ. ಅವರಿಗೆ ನಟನಾಗಬೇಕು ಎಂಬ ಆಸೆ ಬಹಳ ಇತ್ತು. ಕಾಲೇಜು ಸಮಯದಲ್ಲಿ ಅವರು ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ನನ್ನ ತಂದೆ ನಾಯಕನ ಪಾತ್ರ ಮಾಡಿದರೆ ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ನಾಯಕಿಯ ಪಾತ್ರ ಅಥವಾ ಪತ್ನಿಯ ಪಾತ್ರ ಮಾಡುತ್ತಿದ್ದರಂತೆ’ ಎಂದು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಉದ್ಯಮಿ ಸೋನಿಕಾ ಗೌಡ ಗ್ರ್ಯಾಂಡ್ ಎಂಟ್ರಿ
ಮೈ ಆಟೋಗ್ರಾಫ್‌ನಲ್ಲಿ
‘ಈಗಲೂ ಸಹ ಅವರು ಕೂತಲ್ಲಿಯೇ ಮೈಮ್ ನಟನೆ ಮಾಡುತ್ತಾರೆ ಅದು ಅದ್ಭುತ ನನಗೂ ಸಹ ಮಾಡಲು ಬರುವುದಿಲ್ಲ. ಅವರಿಂದ ಸಿಕ್ಕ ಸ್ವಲ್ಪ ಗುಣದಿಂದಲೇ ನಾನು ಇಲ್ಲೀ ವರೆಗೂ ಬಂದಿದ್ದೇನೆ. ಕೌಟುಂಬಿಕ ಜವಾಬ್ದಾರಿಯಿಂದ ಅವರು ನಟ ಆಗಲು ಆಗಲಿಲ್ಲ ಆದರೆ ನನ್ನನ್ನು ನಟ ಮಾಡಿದರು. ಇದೇ ಕಾರಣಕ್ಕೆ ನಾನು ಅವರಿಗೆ ‘ಮೈ ಆಟೋಗ್ರಾಫ್’ ಸಿನಿಮಾನಲ್ಲಿ ಅವಕಾಶ ಕೊಟ್ಟೆ’ ಎಂದು ನೆನಪು ಮಾಡಿಕೊಂಡಿದ್ದಾರೆ.
ತಂದೆಗೆ ವಯಸ್ಸಾಗುತ್ತಿರುವ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ ಸುದೀಪ್, ತಂದೆ ಬಲು ಖಡಕ್ ಆಗಿ ಸಹಿ ಮಾಡುತ್ತಿದ್ದರು. ಆದರೆ ಈಗ ಪತ್ರದಲ್ಲಿ ಸಹಿ ಮಾಡಲು ಅವರು ಪಡುತ್ತಿರುವ ಕಷ್ಟ ನೋಡಿದರೆ ಬಹಳ ದುಃಖವಾಗುತ್ತದೆ ಎಂದರು ಸುದೀಪ್.




