☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

JDS : ಸಿಎಂ ಸ್ವಕ್ಷೇತ್ರ ಕನಕಪುರದಿಂದಲೇ ಜೆಡಿಎಸ್ ರೈತ ಸ್ವಾಭಿಮಾನಿ ಯಾತ್ರೆಗೆ ಚಾಲನೆ

Image of JDS Nikhil Kumaraswamy

ಬೆಂಗಳೂರು: ರಾಜ್ಯದಲ್ಲಿ ಬರದ ವಿಚಾರವಾಗಿ ಸರ್ಕಾರವನ್ನು ಎಚ್ಚರಿಸಲು ಜೆಡಿಎಸ್ (JDS) ಪಕ್ಷ ರೈತ ಸ್ವಾಭಿಮಾನಿ ಯಾತ್ರೆಯನ್ನು ಆರಂಭಿಸಿದೆ. ಈ ಹೋರಾಟದ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರವಾದ ಕನಕಪುರದಿಂದಲೇ ಈ ಯಾತ್ರೆಗೆ ಚಾಲನೆ ನೀಡಲಾಗುತ್ತಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಕನಕಪುರದ ರೈಸ್ ಮಿಲ್ ವೃತ್ತದಿಂದ ಚನ್ನಬಸಪ್ಪ ವೃತ್ತದವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಬಳಿಕ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿ ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ಈ ಯಾತ್ರೆಯ ಮೂಲಕ ಜೆಡಿಎಸ್ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ, ರೈತರ ಎಲ್ಲಾ ಕೃಷಿ ಸಾಲ ಸಂಪೂರ್ಣ ಮನ್ನಾ, ಬೆಳೆಹಾನಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ, ಕೃಷಿ ಪಂಪ್ ಸೆಟ್ ಗಳಿಗೆ ದಿನಕ್ಕೆ ಎಂಟು ಗಂಟೆ ತಡೆರಹಿತ ಉಚಿತ ವಿದ್ಯುತ್ ಮತ್ತು ಜಾನುವಾರುಗಳಿಗೆ ಉಚಿತ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ.

ಇದನ್ನೂ ಓದಿ : ಮೈತ್ರಿ ಸರ್ಕಾರ ಬಂದರೆ ಸಿಎಂ ಯಾರು..? ವಿಜಯೇಂದ್ರ ಹೇಳಿದ್ದೇನು..?

ಈ ಅಭಿಯಾನ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ವಿಸ್ತರಿಸಲಿದ್ದು, ಪ್ರತಿ ಊರಿನ ರೈತರನ್ನು ನೇರವಾಗಿ ಭೇಟಿಯಾಗಿ ಅವರ ಕಷ್ಟ ಆಲಿಸಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಪಾದಯಾತ್ರೆ, ಸಮಾವೇಶ, ರ್ಯಾಲಿ ಮತ್ತು ಅಗತ್ಯವಿದ್ದರೆ ತೀವ್ರ ಪ್ರತಿಭಟನೆಗಳನ್ನು ನಡೆಸಿ ರೈತರಿಗೆ ಆತ್ಮವಿಶ್ವಾಸ ತುಂಬುವ ಗುರಿ ಹೊಂದಿದೆ.

ಈ ಯಾತ್ರೆ ಹಿಂದೆ ಸ್ಪಷ್ಟ ರಾಜಕೀಯ ಲೆಕ್ಕಾಚಾರವಿದೆ. ಮುಖ್ಯಮಂತ್ರಿ ತವರಿನಿಂದಲೇ ಆರಂಭಿಸುವ ಮೂಲಕ ಜೆಡಿಎಸ್ ನೇರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಎಸೆಯಲು ಹೊರಟಿದೆ. ಕನಕಪುರದ ಆಯ್ಕೆ ಆಕಸ್ಮಿಕವಲ್ಲ, ಇದು ಸರ್ಕಾರದ ಭದ್ರಕೋಟೆಗೆ ಲಗ್ಗೆ ಇಡುವ ಸಂಕೇತ. ರಾಜ್ಯದಲ್ಲಿ ಸದ್ಯ ಬರ, ಬೆಳೆನಷ್ಟ, ಬೆಲೆ ಕುಸಿತ ಮತ್ತು ಸಾಲದ ಸುಳಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರದ ಪರಿಹಾರ ಕ್ರಮಗಳು ತಲುಪುತ್ತಿಲ್ಲ ಎಂಬ ಆರೋಪವಿದೆ.

ನಿಖಿಲ್ ನಾಯಕತ್ವ ಪರೀಕ್ಷೆ !

ಇಂತಹ ಸಂದರ್ಭದಲ್ಲಿ ಸ್ವಾಭಿಮಾನಿ ಹೆಸರಿನ ಯಾತ್ರೆಯ ಮೂಲಕ ಜೆಡಿಎಸ್ ತನ್ನ ಮತಬ್ಯಾಂಕ್ ಆದ ರೈತ ಸಮುದಾಯವನ್ನು ಮತ್ತೆ ಸಂಘಟಿಸಲು ಯತ್ನಿಸುತ್ತಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಇದು ನಾಯಕತ್ವ ಪರೀಕ್ಷೆಯೂ ಹೌದು, ಯುವ ನಾಯಕರಾಗಿ ರಾಜ್ಯಾದ್ಯಂತ ಸಂಚರಿಸಿ ರೈತರೊಂದಿಗೆ ನೇರ ಸಂಪರ್ಕ ಬೆಳೆಸಿದರೆ ಪಕ್ಷಕ್ಕೆ ಹೊಸ ಚೈತನ್ಯ ಬರಬಹುದು. ಆದರೆ ಬಿಜೆಪಿ ಜೊತೆಗಿನ ಮೈತ್ರಿಯ ನಂತರ ಜೆಡಿಎಸ್ ತನ್ನ ಜಾತ್ಯತೀತ ರೈತಪರ ಇಮೇಜ್ ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆ ಇದೆ. ಸಾಲಮನ್ನಾ ಮತ್ತು ಎಕರೆಗೆ 25 ಸಾವಿರ ಪರಿಹಾರದ ಬೇಡಿಕೆ ಆರ್ಥಿಕವಾಗಿ ದೊಡ್ಡ ಹೊರೆಯಾದರೂ ರೈತರ ಬದುಕಿಗೆ ಅಗತ್ಯವಾಗಿದೆ.