ನಾಗರತ್ನ ಜೊತೆಗಿನ ದಾಂಪತ್ಯಕ್ಕೆ ಕಾನೂನಾತ್ಮಕ ತೆರೆ: ವಿಚ್ಛೇದನದ ಬಳಿಕ ದುನಿಯಾ ವಿಜಯ್ ಭಾವುಕ ಪೋಸ್ಟ್

ವಿಚ್ಛೇದನದ ಬಳಿಕ ದುನಿಯಾ ವಿಜಯ್ ಭಾವುಕ ಪೋಸ್ಟ್

Photo Credits: @duniyavijayofficial (Instagram)

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಇದೀಗ ಕಾನೂನಾತ್ಮಕವಾಗಿ ಅಧಿಕೃತ ತೆರೆಬಿದ್ದಿದೆ. ಸುದೀರ್ಘ ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಈ ಪ್ರಕರಣಕ್ಕೆ ಹೈಕೋರ್ಟ್ ಆದೇಶ ನೀಡಿದೆ.

ಈ ಕೌಟುಂಬಿಕ ಪ್ರಕರಣದ ತೀರ್ಪು ಹೊರಬಿದ್ದ ಬೆನ್ನಲ್ಲೇ ನಟ ದುನಿಯಾ ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಆಪ್ತ ಅಭಿಮಾನಿಗಳು ಹಾಗೂ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿಯೊಂದನ್ನು ಮಾಡಿದ್ದಾರೆ.

ತಮ್ಮ ಎರಡು ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದಾರೆ. ಈ ವಿಚಾರದಿಂದ ಅವರಿಗೆ ಯಾವುದೇ ರೀತಿಯ ಮುಜುಗರವಾಗಬಾರದು. ಹೀಗಾಗಿ ಈ ಬಗ್ಗೆ ಮಾಧ್ಯಮದಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಷ್ಟಪಡುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.

ಭಾವುಕ ಪೋಸ್ಟ್‌ನಲ್ಲಿ ದುನಿಯಾ ವಿಜಯ್ ಹೇಳಿದ್ದೇನು?

ತಮ್ಮ ಪೋಸ್ಟ್‌ನಲ್ಲಿ ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ ಎಂದು ವಿಜಯ್ ಬರೆದುಕೊಂಡಿದ್ದಾರೆ. ತಮ್ಮ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ ಆದೇಶ ನೀಡಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಹಾಗೂ ತಮ್ಮ ವಕೀಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ, ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿದ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ. ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದು, ಎಲ್ಲರ ಆಶೀರ್ವಾದ ಮತ್ತು ಹಾರೈಕೆ ಹೀಗೆಯೇ ಇರಲಿ ಎಂದು ಕೋರಿದ್ದಾರೆ.

ಕೋರ್ಟ್ ನೀಡಿದ ಈ ತೀರ್ಪಿನಿಂದಾಗಿ ತಮ್ಮ ಕಾನೂನು ಹೋರಾಟ ಮುಗಿದಿದ್ದು, ಇನ್ಮುಂದೆ ತಮ್ಮ ಸಂಪೂರ್ಣ ಗಮನವನ್ನು ನಟನೆ ಹಾಗೂ ಮಕ್ಕಳ ಭವಿಷ್ಯದ ಕಡೆಗೆ ಹರಿಸುವುದಾಗಿ ಅವರು ಪೋಸ್ಟ್‌ನಲ್ಲಿ ಸುಳಿವು ನೀಡಿದ್ದಾರೆ.

Photo Credits: @duniyavijayofficial (Instagram)

ಹೈಕೋರ್ಟ್‌ನಲ್ಲಿ ನಡೆದ ಸುದೀರ್ಘ ವಿಚಾರಣೆ ಹಾಗೂ ಆದೇಶ

ಹಲವು ವರ್ಷಗಳಿಂದ ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಈ ವಿಚ್ಛೇದನ ಅರ್ಜಿಯನ್ನು ಈ ಹಿಂದೆ ತಿರಸ್ಕರಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದುನಿಯಾ ವಿಜಯ್ ಅವರು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಮೊರೆ ಹೋಗಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು, ದಂಪತಿಗಳು ಮತ್ತೆ ಒಂದಾಗಿ ಬಾಳಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನಗಂಡು ಕ್ರೌರ್ಯದ ಆಧಾರದ ಮೇಲೆ ಷರತ್ತುಬದ್ಧ ವಿಚ್ಛೇದನ ಮಂಜೂರು ಮಾಡಿದೆ.

ಅಲ್ಲದೆ, ಪತ್ನಿ ನಾಗರತ್ನ ಅವರಿಗೆ ಮೂರು ತಿಂಗಳ ಒಳಗೆ ‘ಒನ್ ಟೈಮ್ ಸೆಟಲ್‌ಮೆಂಟ್’ ಆಗಿ 2 ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ಮತ್ತು ಮೂವರೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ದುನಿಯಾ ವಿಜಯ್ ಅವರೇ ವಹಿಸಿಕೊಳ್ಳುವಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.