RAJASTHAN ROYALS GIFTS: ಸುದೀಪ್‌ಗೆ ಐಪಿಎಲ್ ಸರ್ಪ್ರೈಸ್; ಜರ್ಸಿ & ಬ್ಯಾಟ್ ಗಿಫ್ಟ್ ಕೊಟ್ಟ ಆಟಗಾರ

ಸುದೀಪ್ಗೆ ಐಪಿಎಲ್ ಸರ್ಪ್ರೈಸ್

Photo Credits: @rajasthanroyals (Instagram)

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿನಿಮಾಗಳ ಜೊತೆಗೆ ಕ್ರಿಕೆಟ್ ಮೇಲಿರುವ ತಮ್ಮ ಅಪಾರ ಪ್ರೀತಿಯಿಂದಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಭಾರತದ ಅತ್ಯಂತ ಜನಪ್ರಿಯ ಟಿ20 ಲೀಗ್ ಆದ ಐಪಿಎಲ್‌ನಲ್ಲಿಯೂ ಅವರು ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸುತ್ತಾ ಇರುತ್ತಾರೆ.

ಇದೀಗ ಐಪಿಎಲ್‌ನ ಪ್ರಮುಖ ತಂಡವಾದ ‘ರಾಜಸ್ಥಾನ್ ರಾಯಲ್ಸ್’ ಹಾಗೂ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜಾಸ್ ಬಟ್ಲರ್ ಅವರು ಕಿಚ್ಚ ಸುದೀಪ್ ಅವರಿಗೆ ಭರ್ಜರಿ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಸುದೀಪ್ ಅವರ ಹೆಸರಿರುವ ವಿಶೇಷ #7 ಸಂಖ್ಯೆಯ ‘KICCHA’ ಜರ್ಸಿ ಹಾಗೂ ಜಾಸ್ ಬಟ್ಲರ್ ಅವರ ಸ್ವಹಸ್ತಾಕ್ಷರ ಹೊಂದಿರುವ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.

ಜಾಸ್ ಬಟ್ಲರ್ ಹಾಗೂ ಕಾರಿಯಪ್ಪಗೆ ಧನ್ಯವಾದ ತಿಳಿಸಿದ ಸುದೀಪ್

ತಮಗೆ ಸಿಕ್ಕ ಈ ಅಪರೂಪದ ಗಿಫ್ಟ್ ನೋಡಿ ಭಾವುಕರಾದ ಹಾಗೂ ಖುಷಿಪಟ್ಟ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

“ಇದು ನಿಜಕ್ಕೂ ನಾನು ಯಾವುದೇ ರೀತಿ ನಿರೀಕ್ಷಿಸದ ದೊಡ್ಡ ಸರ್ಪ್ರೈಸ್ ಆಗಿದೆ. ಈ ಸುಂದರ ಸರ್ಪ್ರೈಸ್ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹಾಗೂ ಇದರ ಹಿಂದೆ ನಿಂತು ನೆರವಾದ ನನ್ನ ಪ್ರೀತಿಯ ಗೆಳೆಯ ಕಾರಿಯಪ್ಪಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಸುದೀಪ್ ತಿಳಿಸಿದ್ದಾರೆ.

ಅಲ್ಲದೆ, ತಮಗೆ ವಿಶೇಷವಾಗಿ ಸೈನ್ ಮಾಡಿದ ಬ್ಯಾಟ್ ಕಳುಹಿಸಿಕೊಟ್ಟ ಜಾಸ್ ಬಟ್ಲರ್ ಅವರಿಗೆ ಧನ್ಯವಾದ ತಿಳಿಸಿ, ಅವರ ಅದ್ಭುತ ಆಟವನ್ನು ಸುದೀಪ್ ಕೊಂಡಾಡಿದ್ದಾರೆ. ‘ಈ ಬ್ಯಾಟ್ ಅನ್ನು ನಾನು ಅತ್ಯಂತ ಪ್ರೀತಿಯಿಂದ ನೆನಪಾಗಿ ಕಾಯ್ದಿಟ್ಟುಕೊಳ್ಳುತ್ತೇನೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಯ್ತು ಸುದೀಪ್ ವಿಡಿಯೋ

ಕಳೆದ ನಾಲ್ಕು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸುದೀಪ್ ಅವರಿಗೆ ತೋರಿಸುತ್ತಿರುವ ಈ ನಿರಂತರ ಪ್ರೀತಿ ಹಾಗೂ ಗೌರವಕ್ಕೆ ಅಭಿಮಾನಿಗಳು ಮತ್ತು ಸಿನೆಮಾ ಪ್ರಿಯರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸುದೀಪ್ ಅವರು ಈ ಉಡುಗೊರೆಗಳನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ವಿಡಿಯೋ ಹಾಗೂ ಜರ್ಸಿ ಹಿಡಿದುಕೊಂಡಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಸ್‌ಗಳ ಮೂಲಕ ತಮ್ಮ ಸಂತಸ ಹಂಚಿಕೊಳ್ಳುತ್ತಿದ್ದಾರೆ.