Photo Credits: @chiranjeevikonidela (Instagram)
ತೆಲುಗು ಚಿತ್ರರಂಗದ ಪವರ್ ಸ್ಟಾರ್ ನಟ ಹಾಗೂ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದು (ಸೆಪ್ಟೆಂಬರ್ 02) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಪವನ್ ಕಲ್ಯಾಣ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಈ ವಿಶೇಷ ದಿನದಂದು ಪವನ್ ಅವರ ಅಣ್ಣ, ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಸಹೋದರನ ವ್ಯಕ್ತಿತ್ವ, ಬದ್ಧತೆ ಹಾಗೂ ನಾಯಕತ್ವದ ಗುಣಗಳನ್ನು ಕೊಂಡಾಡಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಈಗ ಕೇವಲ ಸೂಪರ್ ಸ್ಟಾರ್ ನಟ ಮಾತ್ರವಲ್ಲದೆ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ರಾಷ್ಟ್ರಮಟ್ಟದ ಪ್ರಭಾವಿ ನಾಯಕರಾಗಿದ್ದಾರೆ.
ಬಾಲ್ಯದಿಂದಲೂ ದೃಢಸಂಕಲ್ಪ ಮತ್ತು ಜನಸೇವೆಯ ಬಯಕೆ
ಪವನ್ ಕಲ್ಯಾಣ್ ಅವರು ತಮ್ಮ ಅಣ್ಣ ಚಿರಂಜೀವಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು, ಸಹೋದರನನ್ನು ಪ್ರೀತಿಯಿಂದ ಅಪ್ಪಿಕೊಂಡು ಚಿರಂಜೀವಿ ಅವರು ಶುಭ ಹಾರೈಸಿದ್ದಾರೆ.
‘ನಮ್ಮ ಕಲ್ಯಾಣ್ ಬಾಬು ಅವರಲ್ಲಿ ಬಾಲ್ಯದಿಂದಲೂ ಬದ್ಧತೆಯಿಂದ ತುಂಬಿದ ಪ್ರೀತಿ, ಜವಾಬ್ದಾರಿಯೊಂದಿಗೆ ದೃಢಸಂಕಲ್ಪ ಮತ್ತು ಜನರಿಗೆ ಒಳ್ಳೆಯದನ್ನು ಮಾಡುವ ಪ್ರಾಮಾಣಿಕ ಬಯಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ಅವನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ ಮತ್ತು ಹತ್ತು ಜನರಿಗೆ ಒಳ್ಳೆಯದನ್ನು ಮಾಡುವ ನಿಸ್ವಾರ್ಥ ಬಯಕೆಯೊಂದಿಗೆ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಾನೆ’ ಎಂದು ಚಿರಂಜೀವಿ ಅತ್ಯಂತ ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಪವರ್ ಸ್ಟಾರ್
ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಗ್ರಾಮಗಳ ಅಭಿವೃದ್ಧಿ, ಬುಡಕಟ್ಟು ಪ್ರದೇಶಗಳ ಉನ್ನತಿ, ಪರಿಸರ ಸಂರಕ್ಷಣೆ ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ಸಲುವಾಗಿ ಅವರು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದಾರೆ.
ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಅನೇಕ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ನೀಡುತ್ತಿರುವ ರೀತಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ. ಪಿಠಾಪುರಂ ಜನರು ಅವರನ್ನು ಸಾರ್ವಜನಿಕ ಪ್ರತಿನಿಧಿಯಾಗಿ ಅಲ್ಲ, ತಮ್ಮ ಸ್ವಂತ ಕುಟುಂಬದ ಸದಸ್ಯರಾಗಿ ಸ್ವೀಕರಿಸಿದ್ದಾರೆ’ ಎಂದು ಚಿರಂಜೀವಿ ಹೆಮ್ಮೆಯಿಂದ ಹೇಳಿದ್ದಾರೆ.
ಜನರ ಕಷ್ಟಗಳನ್ನು ತಮ್ಮದೇ ಎಂದು ಪರಿಗಣಿಸುವ ಕಲ್ಯಾಣ್ ಬಾಬು ಆಂಜನೇಯಸ್ವಾಮಿಯ ಕೃಪೆಯಿಂದ ಉತ್ತಮ ಆರೋಗ್ಯದೊಂದಿಗೆ ನೂರು ವರ್ಷ ಬದುಕಿ ಸಾರ್ವಜನಿಕ ಸೇವೆ ಮಾಡಲಿ ಎಂದು ಪ್ರಾರ್ಥಿಸಿ ಚಿರಂಜೀವಿ ಪೋಸ್ಟ್ ಮುಗಿಸಿದ್ದಾರೆ.




