DK SHIVAKUMAR: ರಾಮನಿಗಿಂತ ಸೀತೆ ತ್ಯಾಗವೇ ದೊಡ್ಡದು : ಸಿಎಂ ಡಿಕೆಶಿ

ಎಫ್ ಕೆ ಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಉಬುಂಟು ಸಂಸ್ಥೆಯ ಒಗ್ಗಟ್ಟಾಗಿ ಬೆಳೆಯೋಣ ಎಂಬ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ ಐದನೇ ಆವೃತ್ತಿ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಮೊದಲ ಸ್ಥಾನವಿದೆ, ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ಪಾತ್ರವೇ ದೊಡ್ಡದು, ಆಕೆಯ ತ್ಯಾಗ ಮತ್ತು ಹೋರಾಟ ಎಲ್ಲರಿಗೂ ಮಾದರಿ. ಮಹಿಳೆಯರು ಸೃಷ್ಟಿಶೀಲರು, ಹಲವು ಅಡೆತಡೆಗಳನ್ನು ದಾಟಿ ಉದ್ಯಮ ಕಟ್ಟಿರುವ ನಿಮ್ಮ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.

ಯುವಶಕ್ತಿ ಮತ್ತು ಮಹಿಳೆಯರ ಸಾಮರ್ಥ್ಯದ ಮೇಲೆ ತಮಗೆ ಅಪಾರ ನಂಬಿಕೆ ಇದೆ ಎಂದು ಹೇಳಿದ ಅವರು, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಮಹಿಳೆಯರ ಸ್ವಾವಲಂಬನೆಗೆ ನೆರವಾಗುತ್ತಿವೆ ಎಂದರು. ಶಕ್ತಿ ಯೋಜನೆಯಲ್ಲಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಗೃಹಲಕ್ಷ್ಮಿ ಮೂಲಕ 1.22 ಕೋಟಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಿಗುತ್ತಿದ್ದು ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಜೊತೆಗೆ ಶೇ ನಾಲ್ಕರ ಬಡ್ಡಿಯಲ್ಲಿ ಸಾಲ, ಸಹಾಯಧನ, ಸ್ತ್ರೀಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಹೊರಬರುವ ವೈದ್ಯರಲ್ಲಿ ಶೇ 40ರಷ್ಟು ಮಹಿಳೆಯರಿದ್ದಾರೆ, ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತರಲ್ಲ, ಉತ್ತಮ ಚಿಂತಕರು ಮತ್ತು ಉದ್ಯಮಿಗಳು ಎಂದು ಅವರು ಅಭಿಪ್ರಾಯಪಟ್ಟರು.

ಉಬುಂಟು ವೇದಿಕೆ ಸಾವಿರಾರು ಕನಸುಗಳನ್ನು ಒಂದುಗೂಡಿಸಿದೆ, ಎಲ್ಲರೂ ಒಟ್ಟಿಗೆ ಬೆಳೆಯಬೇಕು. ಕುಟುಂಬದ ಜವಾಬ್ದಾರಿಯ ಜೊತೆಗೆ ಯಾವುದೇ ಕೆಲಸವನ್ನು ಮಹಿಳೆಯರು ಅತ್ಯುತ್ತಮವಾಗಿ ನಿಭಾಯಿಸಬಲ್ಲರು ಎಂಬುದು ಈಗಾಗಲೇ ಸಾಬೀತಾಗಿದೆ. ಮೊದಲ ಮಗು ಗಂಡಾಗಬೇಕು ಎಂಬ ಮನೋಭಾವದಿಂದ ನಾವು ಹೊರಬರಬೇಕು, ಮಕ್ಕಳಿಗೆ ಮೌಲ್ಯ ಮತ್ತು ಶಿಸ್ತು ಕಲಿಸಬೇಕು. ತಮ್ಮ ಮಗಳೇ ಸಶಕ್ತ ಮಹಿಳೆಯಾಗಿ ಕುಟುಂಬ ಮತ್ತು ಉದ್ಯಮ ಎರಡನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಅವರು ಉದಾಹರಣೆಯಾಗಿ ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಕುಟುಂಬದ ಕಣ್ಣು ಎಂದು ಪರಿಗಣಿಸಲಾಗುತ್ತದೆ. ನೀವು ಉದ್ಯೋಗ ಸೃಷ್ಟಿಕರ್ತರು, ಆರ್ಥಿಕ ಸವಾಲುಗಳನ್ನು ಎದುರಿಸಿ ನಿಂತಿರುವುದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು. ಸೋನಿಯಾ ಗಾಂಧಿಯವರು ಕುಟುಂಬದಲ್ಲಿ ಆದ ನಷ್ಟಗಳನ್ನು ಮೀರಿ ಪಕ್ಷವನ್ನು ಮುನ್ನಡೆಸಿ, ಪ್ರಧಾನಿ ಹುದ್ದೆಯ ಅವಕಾಶವಿದ್ದರೂ ಮನಮೋಹನ್ ಸಿಂಗ್ ಅವರಿಗೆ ಅವಕಾಶ ನೀಡಿದ್ದು ತ್ಯಾಗಕ್ಕೆ ಸಂಕೇತ. ದ್ರೌಪದಿ, ಕುಂತಿ, ಚಾಮುಂಡೇಶ್ವರಿ, ಗ್ರಾಮದೇವತೆಗಳಂತೆ ಮಹಿಳೆಯರಿಗೆ ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನವಿದೆ. ಪಕ್ಷಾತೀತವಾಗಿ ಮಹಿಳಾ ಮೀಸಲಾತಿಯನ್ನು ಒಪ್ಪಿದ್ದೇವೆ, ಗ್ರಾಮಪಂಚಾಯತಿಯಿಂದ ಸಂಸತ್ತಿನವರೆಗೆ ಶೇ 33ರ ಮೀಸಲಾತಿ ಇರುವುದರಿಂದ ಮಹಿಳೆಯರು ನಾಯಕರಾಗುವುದು ತಪ್ಪುವುದಿಲ್ಲ ಎಂದರು.

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರೂಪಿಸಿರುವ ಟನೆಲ್ ಯೋಜನೆಯನ್ನು ರಾಜಕೀಯ ಕಾರಣಕ್ಕೆ ವಿರೋಧಿಸಲಾಗುತ್ತಿದೆ, ಆದರೆ ಇದು ಜನರ ಸಮಯ ಮತ್ತು ಹಣ ಉಳಿಸುತ್ತದೆ. ನಗರದಲ್ಲಿ 1.4 ಕೋಟಿ ವಾಹನಗಳಿದ್ದು ಸರ್ಕಾರ ಸಂಚಾರ ಮೂಲಸೌಕರ್ಯಕ್ಕೆ 1.5 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಉದ್ಯಮಿಗಳು ಈ ಯೋಜನೆಯ ಪರವಾಗಿ ಧ್ವನಿ ಎತ್ತಬೇಕು. ದೇಹದಲ್ಲಿ ರಕ್ತ, ಸಮಾಜದಲ್ಲಿ ಹಣ ನಿರಂತರ ಹರಿಯಬೇಕು, ಒಂದೆಡೆ ಕೂಡಿಟ್ಟರೆ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳಾ ಉದ್ಯಮಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೆ ರಾಜ್ಯದ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು ಎಂದು ಅವರು ಕರೆ ನೀಡಿದರು.