CT RAVI : ಸನಾತನ ಧರ್ಮ ಜಿಹಾದ್ ಪರಿಕಲ್ಪನೆ ನೀಡಿಲ್ಲ- ಇಸ್ಲಾಂ ಶ್ರೇಷ್ಠ ಎಂದ ರಾಯರೆಡ್ಡಿ ವಿರುದ್ಧ ಸಿ.ಟಿ.ರವಿ ಕಿಡಿ

ಕೊಪ್ಪಳದ ಕುಕನೂರಿನಲ್ಲಿ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮವನ್ನು ಎಲ್ಲಕ್ಕಿಂತ ಶ್ರೇಷ್ಠ ಎಂದು ಬಣ್ಣಿಸಿದ್ದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿ.ಟಿ. ರವಿ ಅವರು, ಇಸ್ಲಾಂ ಅಷ್ಟು ಶ್ರೇಷ್ಠವೆನಿಸಿದರೆ ರಾಯರೆಡ್ಡಿ ಅವರು ಕಲ್ಮಾ ಹೇಳಿ ಹಜ್ ಯಾತ್ರೆಗೆ ತೆರಳಿ ಅಲ್ಲಿಯೇ ಉಳಿದುಕೊಳ್ಳಲಿ, ಮತ್ತೆ ಭಾರತದ ಕಡೆ ಬರುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ಅವರು, ರಾಯರೆಡ್ಡಿ ಅವರ ಮಾತು ಜಗಜ್ಯೋತಿ ಬಸವಣ್ಣನವರು ಸಾರಿದ ದಯೆಯೇ ಧರ್ಮದ ಮೂಲವಯ್ಯ ಎಂಬ ಮಹಾನ್ ತತ್ವಕ್ಕೆ ಮಾಡಿದ ಘೋರ ಅವಮಾನ ಎಂದು ಕಿಡಿಕಾರಿದ್ದಾರೆ. ರಾಯರೆಡ್ಡಿ ಅವರು ಒಮ್ಮೆ ಕುರಾನ್ ಅನ್ನು ಪೂರ್ಣವಾಗಿ ಅಧ್ಯಯನ ಮಾಡಿದರೆ ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತಾರೆ ಎಂದು ಹೇಳಿರುವ ಅವರು, ಸನಾತನ ಧರ್ಮ ಎಂದಿಗೂ ಜಿಹಾದ್ ನಂತಹ ಪರಿಕಲ್ಪನೆಯನ್ನು ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಕೇವಲ ವೈಯಕ್ತಿಕ ಅಭಿಪ್ರಾಯವಾಗಿ ಉಳಿದಿಲ್ಲ. ಉನ್ನತ ಶಿಕ್ಷಣದಂತಹ ಅತ್ಯಂತ ಜವಾಬ್ದಾರಿಯುತ ಇಲಾಖೆಯನ್ನು ನಿಭಾಯಿಸುತ್ತಿರುವ ಸಚಿವರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಒಂದು ನಿರ್ದಿಷ್ಟ ಧರ್ಮವನ್ನು ಉಳಿದೆಲ್ಲಕ್ಕಿಂತ ಮೇಲೆ ಎಂದು ಹೇಳುವುದು ಸಂವಿಧಾನದ ಜಾತ್ಯತೀತ ಆಶಯಕ್ಕೆ ವಿರುದ್ಧ ಸಂದೇಶವನ್ನು ನೀಡುತ್ತದೆ. ಎಲ್ಲ ಧರ್ಮಗಳಲ್ಲೂ ಮಾನವೀಯ ಮೌಲ್ಯಗಳಿವೆ ಎಂದು ಹೇಳುವ ಬದಲುಈ ರೀತಿಯ ಹೇಳಿಕೆ ಸಹಜವಾಗಿಯೇ ವಿವಾದಕ್ಕೆ ಎಡೆಮಾಡಿಕೊಡುತ್ತದೆ. ಅದರಲ್ಲೂ ತಾವು ಮಠ ಮಾನ್ಯಗಳಿಗೆ ಹೋಗುವುದಿಲ್ಲ, ದೇವಸ್ಥಾನಕ್ಕೆ ಹೋಗುವುದಿಲ್ಲ, ಹಜ್ ಯಾತ್ರೆಗೆ ಹೋಗುವ ಆಸೆ ಇದೆ, ಅದಕ್ಕೆ ಮತಾಂತರವಾಗಬೇಕು ಎಂದು ಹೇಳಿರುವುದು ಅವರದೇ ಪಕ್ಷದ ಸಾಂಪ್ರದಾಯಿಕ ಮತದಾರರಲ್ಲಿ ಅಸಮಾಧಾನ ಮೂಡಿಸಿದೆ.

ಇನ್ನೊಂದೆಡೆ ಸಿ.ಟಿ. ರವಿ ಅವರ ಪ್ರತಿಕ್ರಿಯೆಯಲ್ಲೂ ತೀವ್ರತೆ ಎದ್ದು ಕಾಣುತ್ತದೆ. ಹಜ್ ಗೆ ಹೋಗಿ ಅಲ್ಲೇ ಇರಿ ಎಂಬ ಮಾತು ರಾಜಕೀಯವಾಗಿ ಚುಚ್ಚುವಂತಿದ್ದರೂ, ಅದು ಚರ್ಚೆಯನ್ನು ಧರ್ಮಗಳ ತಾತ್ವಿಕ ಅಧ್ಯಯನದಿಂದ ವೈಯಕ್ತಿಕ ದಾಳಿಯ ಹಂತಕ್ಕೆ ಕೊಂಡೊಯ್ಯುತ್ತದೆ. ಕುರಾನ್ ಅಧ್ಯಯನದ ಸಲಹೆ ಸ್ವಾಗತಾರ್ಹವಾದರೂ, ಅಲ್ಲಾನನ್ನು ಒಪ್ಪದವರನ್ನು ಕಾಫಿರ್ ಎಂದು ಕರೆದು ಹತ್ಯೆಗೆ ಪ್ರಚೋದಿಸುವಂತಹ ಅಂಶಗಳಿವೆ ಎಂಬ ಅವರ ಉಲ್ಲೇಖ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಕೋಮು ಧ್ರುವೀಕರಣಕ್ಕೆ ಕಾರಣವಾಗುವ ಹೇಳಿಕೆಯಂತಿದೆ. ಅಜ್ಞಾನದ ಪರಾಕಾಷ್ಠೆ ಇರುವ ವ್ಯಕ್ತಿ ಉನ್ನತ ಶಿಕ್ಷಣ ಸಚಿವರಾಗಿರುವುದು ದುರಂತ ಎಂದು ಅವರು ಟೀಕಿಸಿರುವುದು ಚರ್ಚೆಯನ್ನು ಮತ್ತಷ್ಟು ಬಿಸಿಯಾಗಿಸಿದೆ.

ಬಸವಣ್ಣನವರು ದಯೆ, ಸಮಾನತೆ ಮತ್ತು ಕಾಯಕವನ್ನು ಪ್ರತಿಪಾದಿಸಿದರೇ ಹೊರತು ಯಾವುದೇ ಧರ್ಮವನ್ನು ಕೀಳಾಗಿ ಕಾಣಲಿಲ್ಲ. ರಾಯರೆಡ್ಡಿ ಅವರು ತಮ್ಮನ್ನು ಶರಣ ಪರಂಪರೆಯ ಹಿನ್ನೆಲೆಯಿಂದ ಗುರುತಿಸಿಕೊಳ್ಳುತ್ತಾ ಬಂದವರು. ಹೀಗಿರುವಾಗ ಇಸ್ಲಾಂ ಶ್ರೇಷ್ಠ ಎಂಬ ಹೇಳಿಕೆ ಶರಣ ತತ್ವಕ್ಕೆ ವಿರುದ್ಧವಲ್ಲ, ಆದರೆ ಇತರ ಧರ್ಮಗಳನ್ನು ಕಡೆಗಣಿಸಿದಂತೆ ಭಾಸವಾಗಬಾರದು. ಈ ವಿವಾದದ ಬೆನ್ನಲ್ಲೇ ರಾಯರೆಡ್ಡಿ ಅವರು ಶರಣ ತತ್ವವೇ ಬೆಸ್ಟ್, ಎಲ್ಲ ಧರ್ಮಗಳೂ ಶ್ರೇಷ್ಠ ಎಂದು ಯೂಟರ್ನ್ ಹೊಡೆದಿರುವುದು ಈ ಹೇಳಿಕೆಯಿಂದಾಗುವ ರಾಜಕೀಯ ಹಾನಿಯನ್ನು ಅವರು ಅರಿತಿರುವುದನ್ನು ತೋರಿಸುತ್ತದೆ.