ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7.8ಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಆರ್ಥಿಕತೆ ಬಗ್ಗೆ ಅಪನಂಬಿಕೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವರ ಕಥನವನ್ನು ಈ ಅಂಕಿ ಅಂಶಗಳು ಸಂಪೂರ್ಣವಾಗಿ ಒಡೆದು ಹಾಕಿವೆ ಎಂದು ಮೋದಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಮತ್ತು ಸವಾಲುಗಳು ಮುಂದುವರೆದಿದ್ದರೂ ಭಾರತ ಶೇ.7.8ರ ದರವನ್ನು ಉಳಿಸಿಕೊಂಡಿರುವುದು ನಮ್ಮ ಆರ್ಥಿಕತೆಯ ಶಕ್ತಿಗೆ ಸಾಕ್ಷಿ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ವಿಪಕ್ಷಗಳು ಹರಡುತ್ತಿರುವ ನಿರಾಶಾವಾದ ಮತ್ತು ಅಪಪ್ರಚಾರವನ್ನು ಪ್ರಸ್ತಾಪಿಸಿ, ಸುಳ್ಳಿನ ಸದ್ದು ಮಾಡುವವರು ನಿಜವಾದ ಪ್ರಗತಿಯ ಮುಂದೆ ಮುಖಭಂಗ ಅನುಭವಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಭಾರತ ಜಗತ್ತಿನ ಅತೀ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಎಂಬ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಿದೆ. ಉತ್ಪಾದನೆ, ಸೇವಾ ವಲಯ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿನ ಗಟ್ಟಿತನವೇ ಇದಕ್ಕೆ ಕಾರಣ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರು ಆರ್ಥಿಕ ಕುಸಿತ, ಉದ್ಯೋಗದ ಕೊರತೆ ಮತ್ತು ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಸತ ದಾಳಿ ನಡೆಸುತ್ತಿದ್ದು, ಈ ಶೇ.7.8ರ ಬೆಳವಣಿಗೆಯೇ ಅವರ ಆರೋಪಗಳಿಗೆ ತಕ್ಕ ಉತ್ತರ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಸಚಿವರು ಇದನ್ನು ಪ್ರಧಾನಿಯವರ ದೂರದೃಷ್ಟಿಯ ನಾಯಕತ್ವದ ಗೆಲುವು ಎಂದು ಕರೆದಿದ್ದು, ವಿಶ್ವದ ಬಲಿಷ್ಠ ರಾಷ್ಟ್ರಗಳು ನಿಧಾನಗತಿಯಲ್ಲಿ ಸಾಗುತ್ತಿರುವಾಗ ಭಾರತದ ಈ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಮತ್ತು ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಈ ಶೇ.7.8ರ ತ್ರೈಮಾಸಿಕ ಬೆಳವಣಿಗೆ ನಿಜಕ್ಕೂ ಜಾಗತಿಕ ಹೋಲಿಕೆಯಲ್ಲಿ ಗಮನಾರ್ಹ ಸಾಧನೆಯೇ. ಅಮೆರಿಕ, ಯುರೋಪ್ ಮತ್ತು ಚೀನಾ ನಿಧಾನಗತಿಯಲ್ಲಿರುವಾಗ ಭಾರತ ಸ್ಥಿರತೆಯನ್ನು ತೋರಿಸುತ್ತಿದೆ ಎಂಬುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಉತ್ಪಾದನಾ ವಲಯದಲ್ಲಿ ಪಿಎಲ್ಐ ಯೋಜನೆಗಳ ಪರಿಣಾಮ ಮತ್ತು ಸೇವಾ ವಲಯದಲ್ಲಿ ಡಿಜಿಟಲ್ ಹಾಗೂ ಹಣಕಾಸು ಸೇವೆಗಳ ಚೇತರಿಕೆ ಈ ಬೆಳವಣಿಗೆಗೆ ಬೆನ್ನೆಲುಬಾಗಿದೆ.
ಆದರೆ ಜಿಡಿಪಿ ಸಂಖ್ಯೆ ಒಂದೇ ಆರ್ಥಿಕತೆಯ ಸಂಪೂರ್ಣ ಚಿತ್ರಣವಲ್ಲ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಎತ್ತುತ್ತಿರುವ ಉದ್ಯೋಗ ಸೃಷ್ಟಿ, ಅಸಮಾನತೆ ಮತ್ತು ಹಣದುಬ್ಬರದ ಪ್ರಶ್ನೆಗಳು ಅಂಕಿ ಅಂಶದಾಚೆಗಿನ ನೆಲದ ವಾಸ್ತವಕ್ಕೆ ಸಂಬಂಧಿಸಿವೆ. ಬೆಳವಣಿಗೆ ದರ ಹೆಚ್ಚಿದ್ದರೂ ಯುವಜನರಲ್ಲಿ ಉದ್ಯೋಗದ ಆತಂಕ, ಅನೌಪಚಾರಿಕ ವಲಯದ ಸಂಕಷ್ಟ ಮತ್ತು ಗ್ರಾಮೀಣ ಬೇಡಿಕೆಯ ಏರಿಳಿತಗಳು ಇನ್ನೂ ಸವಾಲಾಗಿಯೇ ಉಳಿದಿವೆ. ಜಿಡಿಪಿ ಬೆಳವಣಿಗೆ ಮತ್ತು ಜನಸಾಮಾನ್ಯರ ಕೊಳ್ಳುವ ಶಕ್ತಿಯ ನಡುವಿನ ಅಂತರವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ ಮುಂದಿನ ದೊಡ್ಡ ಪರೀಕ್ಷೆ.
ರಾಜಕೀಯವಾಗಿ ನೋಡಿದರೆ, ಮೋದಿ ಅವರು ಈ ಅಂಕಿಯನ್ನು ವಿಪಕ್ಷಗಳ ನಿರಾಶಾವಾದಿ ನಿರೂಪಣೆಯನ್ನು ಧ್ವಂಸಗೊಳಿಸುವ ಸಾಧನವಾಗಿ ಬಳಸುತ್ತಿದ್ದಾರೆ. ಸುಳ್ಳಿನ ಸದ್ದು ಎಂಬ ಪದಬಳಕೆ ಮೂಲಕ ರಾಹುಲ್ ಗಾಂಧಿ ಅವರ ಟೀಕೆಗಳನ್ನು ಸುಳ್ಳು ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನವಿದೆ. ಇದು ಚುನಾವಣಾ ವರ್ಷದ ಸಮೀಪದಲ್ಲಿ ಆರ್ಥಿಕತೆಯೇ ಬಿಜೆಪಿಯ ಪ್ರಮುಖ ಪ್ರಚಾರ ಅಸ್ತ್ರವಾಗಲಿದೆ.




