LAKSHMIPUTHRA: ರಾಜ್ಯೋತ್ಸವದ ತಿಂಗಳಲ್ಲೇ ಧಮಾಕಾ ಮಾಡಲಿದ್ದಾರೆ ಚಿಕ್ಕಣ್ಣ

ರಿಲೀಸ್ ಡೇಟ್ ಫಿಕ್ಸ್

Photo Credits: @aparjunfilms_official (Instagram)

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಮ್ಮೆ ಧಮಾಕಾ ಮಾಡಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ‘ಲಕ್ಷ್ಮೀಪುತ್ರ’ ಶೀಘ್ರದಲ್ಲೇ ತೆರೆಗೆ ಬರಲಿದೆ.

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಇಡೀ ‘ಲಕ್ಷ್ಮೀಪುತ್ರ’ ಚಿತ್ರತಂಡ ಒಂದೆಡೆ ಸೇರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದೆ. ಇದರ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಹಬ್ಬದ ಉಡುಗೊರೆ ನೀಡಿದೆ.

ಚಿಕ್ಕಣ್ಣ ತಮ್ಮ ಮದುವೆಯ ತಯಾರಿಯ ನಡುವೆಯೇ ಹೊಸ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಅಭಿಮಾನಿಗಳಲ್ಲಿ ಮತ್ತು ಸ್ಯಾಂಡಲ್‌ವುಡ್ ಅಂಗಳದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ರಾಜ್ಯೋತ್ಸವದ ತಿಂಗಳಲ್ಲೇ ರಿಲೀಸ್ ಆಗಲಿದೆ ‘ಲಕ್ಷ್ಮೀಪುತ್ರ’

ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಚಿಕ್ಕಣ್ಣ, ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಾದ ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಚಿಕ್ಕಣ್ಣ, “ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಗಣೇಶೋತ್ಸವ ಮತ್ತು ರಾಜ್ಯೋತ್ಸವದ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು” ಎಂದು ಹೇಳಿದ್ದಾರೆ.

ಅದೇ ರಾಜ್ಯೋತ್ಸವದ ತಿಂಗಳಲ್ಲಿ ತಮ್ಮ ನಾಯಕನಟನೆಯ ಚಿತ್ರ ಬಿಡುಗಡೆಯಾಗುತ್ತಿರುವುದು ಅತ್ಯಂತ ವಿಶೇಷವಾಗಿದ್ದು, ಪ್ರೇಕ್ಷಕರು ಎಂದಿನಂತೆ ಪ್ರೀತಿ ಹಾಗೂ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮಂಡ್ಯ ಸೊಗಡಿನ ಕಥೆ: ತಾಯಿ-ಮಗನ ಅತ್ತಿಪ್ತ ಬಾಂಧವ್ಯ

ಚಿತ್ರದ ಕಥಾಹಂದರದ ಬಗ್ಗೆ ವಿವರಿಸಿದ ನಿರ್ಮಾಪಕ ಎ.ಪಿ. ಅರ್ಜುನ್, “ಲಕ್ಷ್ಮಿ ಎಂದ ತಕ್ಷಣ ಮೊದಲು ನೆನಪಾಗುವುದು ತಾಯಿ. ಆ ನಂತರ ಅಕ್ಕ-ತಂಗಿ ಹಾಗೂ ಬಾಳಸಂಗಾತಿ” ಎಂದು ಹೇಳಿದ್ದಾರೆ.

ಈ ಸಿನಿಮಾ ಮಂಡ್ಯದ ಸೊಗಡಿನಲ್ಲಿ ಸಾಗಲಿದ್ದು, ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯದ ಕಥೆಯನ್ನು ಹೊಂದಿದೆ. ಜೊತೆಗೆ ಆರಂಭದಿಂದ ಕೊನೆಯವರೆಗೂ ಭರ್ಜರಿ ಹಾಸ್ಯ ಮತ್ತು ಆಪ್ತವಾದ ಪ್ರೇಮಕಥೆ ಇರಲಿದೆ.

ಚಿತ್ರದ ನಾಯಕಿ ವಂದಿತಾ ಗೌಡ ಮಾತನಾಡಿ, ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದ್ದು ಪ್ರೇಕ್ಷಕರ ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ ಎಂದಿದ್ದಾರೆ.

ದೊಡ್ಡ ತಾರಾಗಣ ಹೊಂದಿರುವ ಕೌಟುಂಬಿಕ ಸಿನಿಮಾ

ಈ ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ಬರೆದು, ಅನ್ನಪೂರ್ಣ ಎ.ಪಿ. ಅರ್ಜುನ್ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು ಮತ್ತು ಮಿತ್ರ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಕೌಟುಂಬಿಕ ಹಾಗೂ ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ‘ಲಕ್ಷ್ಮೀಪುತ್ರ’ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ.