ಮೈಸೂರಿನಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮರಸೆ ಮತ್ತು ಮದರಗಳ್ಳಿ ಗ್ರಾಮಗಳಲ್ಲಿ ಸುಮಾರು 165 ಎಕರೆ ಜಮೀನಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.
ಈ ಪ್ರದೇಶದಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಾಣಿಜ್ಯ ಮತ್ತು ಆಹಾರ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಉತ್ತಮ ಇಳುವರಿ ನೀಡುತ್ತಿರುವ ಭೂಮಿಯನ್ನೇ ಕೈಗಾರಿಕಾ ಪ್ರದೇಶ ನಿರ್ಮಾಣದ ಹೆಸರಿನಲ್ಲಿ ಪಡೆಯಲು ಹೊರಟಿರುವುದು ಅನ್ನದಾತರಲ್ಲಿ ಆತಂಕ ಸೃಷ್ಟಿಸಿದೆ. ರಾಮನಗರ ಜಿಲ್ಲೆಯ ಬಿಡದಿ ಟೌನ್ ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ ಮೈಸೂರಿನಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿರುವುದರಿಂದ ಗ್ರಾಮಸ್ಥರು ಮತ್ತು ರೈತ ಸಂಘಟನೆಗಳು ತಮ್ಮ ಜೀವನಾಧಾರವಾದ ಜಮೀನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಬಿಡದಿ ಮಾದರಿಯಲ್ಲೇ ಬೃಹತ್ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಭೂಮಿ ಅಗತ್ಯ ಎಂಬುದು ನಿಜವಾದರೂ, ಫಲವತ್ತಾದ ಕೃಷಿ ಭೂಮಿಯನ್ನೇ ಗುರಿಯಾಗಿಸುವ ಪ್ರವೃತ್ತಿ ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿದೆ. ವಿಮಾನ ನಿಲ್ದಾಣ ಸಮೀಪದ ಜಮೀನಿಗೆ ವಾಣಿಜ್ಯ ಮೌಲ್ಯ ಹೆಚ್ಚಿರುವುದರಿಂದ ಅಂತಹ ಪ್ರದೇಶಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತಿದೆ. ಆದರೆ ಅಲ್ಲಿ ವರ್ಷಗಳಿಂದ ಬೆಳೆ ತೆಗೆಯುತ್ತಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಇದು ಬದುಕಿನ ಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಇದು ಕೈಗಾರಿಕೆ, ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಯೋಜನೆಯಾದರೆ, ರೈತರ ಪಾಲಿಗೆ ಇದು ವಲಸೆ ಮತ್ತು ನಿರುದ್ಯೋಗದ ಭೀತಿ. ಬಿಡದಿಯಲ್ಲಿ ಕಂಡುಬಂದಂತೆ, ಪರಿಹಾರ, ಪುನರ್ವಸತಿ ಮತ್ತು ಒಪ್ಪಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಈ ಹೋರಾಟ ರಾಜಕೀಯ ಸ್ವರೂಪ ಪಡೆಯುವ ಸಾಧ್ಯತೆ ಹೆಚ್ಚು. ಅದರಲ್ಲೂ ಮಾಜಿ ಸಿಎಂ ಸಿದ್ದು ಸ್ವಕ್ಷೇತ್ರದಲ್ಲೇ ಈ ಸ್ವಾಧೀನ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ಇದು ಕೇವಲ ಭೂಸ್ವಾಧೀನ ವಿಚಾರವಾಗಿ ಉಳಿಯದೆ, ರೈತಪರ ಎಂಬ ತನ್ನ ಘೋಷಣೆಯ ಪರೀಕ್ಷೆಯಾಗಲಿದೆ.




