@colorskannadaofficial (Instagram)
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿದೆ. ದೊಡ್ಮನೆಗೆ ಒಂದರ ಮೇಲೊಂದರಂತೆ ರೋಚಕ ಎಂಟ್ರಿಗಳು ನಡೆಯುತ್ತಿವೆ.
ಇದೀಗ ನಟಿ ಸಂಗೀತಾ ಭಟ್ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಅವರ ಆಗಮನ ಭಾರಿ ಕುತೂಹಲ ಮೂಡಿಸಿದೆ. ಈ ಇಬ್ಬರ ಎಂಟ್ರಿಯಿಂದ ವೇದಿಕೆಯಲ್ಲಿ ಸಖತ್ ಕಾಮಿಡಿ ವಾತಾವರಣ ನಿರ್ಮಾಣವಾಗಿತ್ತು.
ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಈ ರಿಯಾಲಿಟಿ ಶೋನಲ್ಲಿ, ಒಂದೇ ವೇದಿಕೆಯಲ್ಲಿ ರಿಯಲ್ ಪತ್ನಿ ಹಾಗೂ ರೀಲ್ ಪತ್ನಿ ಮುಖಾಮುಖಿಯಾಗಿದ್ದು ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದೆ.
ಆರನೇ ಸ್ಪರ್ಧಿಯಾಗಿ ಸಂಗೀತಾ ಭಟ್ ಎಂಟ್ರಿ
ಬಿಗ್ ಬಾಸ್ ಮನೆಗೆ ಆರನೇ ಸ್ಪರ್ಧಿಯಾಗಿ ನಟಿ ಸಂಗೀತಾ ಭಟ್ ಗ್ರ್ಯಾಂಡ್ ಎಂಟ್ರಿ ಕೊಟ್ಟರು. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ಅವರಿಗೆ ವೇದಿಕೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಈ ವೇಳೆ ಸಂಗೀತಾ ಅವರ ಪತಿ ಸುದರ್ಶನ್ ರಂಗಪ್ರಸಾದ್ ಕೂಡ ವೇದಿಕೆಗೆ ಆಗಮಿಸಿದ್ದರು. ತಮ್ಮ ಪತ್ನಿಯ ಸ್ವಭಾವದ ಬಗ್ಗೆ ತಮಾಷೆಯಾಗಿ ಮಾತನಾಡಿದ ಸುದರ್ಶನ್, ಸಂಗೀತಾಗೆ ಗಲೀಜು ಕಂಡರೆ ಆಗುವುದಿಲ್ಲ. ಮನೆಯನ್ನು ತುಂಬಾ ಕ್ಲೀನ್ ಆಗಿ ಇಡುತ್ತಾರೆ ಎಂದು ಕಾಲೆಳೆದರು.
ಏಳನೇ ಸ್ಪರ್ಧಿಯಾಗಿ ಕಾಲಿಟ್ಟ ಕಾವ್ಯಾ ಗೌಡ
ಸಂಗೀತಾ ಭಟ್ ಎಂಟ್ರಿ ಬೆನ್ನಲ್ಲೇ, ನಟಿ ಕಾವ್ಯಾ ಗೌಡ ಏಳನೇ ಸ್ಪರ್ಧಿಯಾಗಿ ಬಿಗ್ ಬಾಸ್ ವೇದಿಕೆ ಏರಿದರು. ಕಾವ್ಯಾ ಕಿರುತೆರೆಯಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ವಿಶೇಷವೆಂದರೆ, ಕಾವ್ಯಾ ಗೌಡ ಅವರು ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುದರ್ಶನ್ ರಂಗಪ್ರಸಾದ್ ಅವರೊಂದಿಗೆ ನಟಿಸಿದ್ದರು. ಹೀಗಾಗಿ ಇವರ ಎಂಟ್ರಿ ದೊಡ್ಮನೆ ಅಂಗಳದಲ್ಲಿ ಮತ್ತಷ್ಟು ರಂಗು ಹೆಚ್ಚಿಸಿತು.
ತಾಂಡವ್ – ಶ್ರೇಷ್ಠಾ ಆನ್‌ಸ್ಕ್ರೀನ್ ಜೋಡಿ
ಧಾರಾವಾಹಿಯಲ್ಲಿ ಸುದರ್ಶನ್ ಅವರು ‘ತಾಂಡವ್’ ಪಾತ್ರ ಮಾಡಿದರೆ, ಕಾವ್ಯಾ ‘ಶ್ರೇಷ್ಠಾ’ ಪಾತ್ರದಲ್ಲಿ ನಟಿಸಿದ್ದರು. ಈ ಮೂಲಕ ಇಬ್ಬರೂ ಜನಪ್ರಿಯ ಆನ್‌ಸ್ಕ್ರೀನ್ ಜೋಡಿಯಾಗಿ ಗುರುತಿಸಿಕೊಂಡಿದ್ದರು.
ಒಂದೇ ವೇದಿಕೆಯಲ್ಲಿ ಆಫ್‌ಸ್ಕ್ರೀನ್ ವೈಫ್ ಸಂಗೀತಾ ಮತ್ತು ಆನ್‌ಸ್ಕ್ರೀನ್ ವೈಫ್ ಕಾವ್ಯಾ ಅವರನ್ನು ನೋಡಿ ಸುದರ್ಶನ್ ಶಾಕ್ ಆದರು. ಕಿಚ್ಚ ಸುದೀಪ್ ಬಳಿ ತಮಾಷೆಯಾಗಿ ತಮ್ಮ ಅಳಲು ತೋಡಿಕೊಂಡರು.
“ಇಬ್ಬರ ನಡುವೆ ಜಗಳವಾದರೆ ನಾನು ಎಲ್ಲಿಗೆ ಹೋಗಲಿ?”
“ನನ್ನ ರಿಯಲ್ ಹೆಂಡತಿ ಮತ್ತು ರೀಲ್ ಹೆಂಡತಿ ಇಬ್ಬರೂ ಇಲ್ಲೇ ಇದ್ದಾರೆ. ಅವರ ನಡುವೆ ಜಗಳ ಶುರುವಾದರೆ ನಾನು ಎಲ್ಲಿಗೆ ಹೋಗಬೇಕು?” ಎಂದು ಸುದರ್ಶನ್ ಹಾಸ್ಯವಾಗಿ ಕೇಳಿದರು.
ಸುದರ್ಶನ್ ಅವರ ಈ ಮಜಾದಾಯಕ ಮಾತುಗಳಿಗೆ ಕಿಚ್ಚ ಸುದೀಪ್ ಸೇರಿದಂತೆ ಇಡೀ ಪ್ರೇಕ್ಷಕ ಸಮೂಹ ಬಿದ್ದು ಬಿದ್ದು ನಕ್ಕಿತು. ಈ ಘಟನೆ ಸೀಸನ್ 13ರ ಆರಂಭಕ್ಕೆ ದೊಡ್ಡ ಹೈಲೈಟ್ ಆಯಿತು.




