PRIYANK KHARGE : ಆರ್.ಎಸ್.ಎಸ್ ನೋಂದಣಿಗೆ ನಾನೇ ಕಾಸು ಕೊಡ್ತಿನಿ : ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾನೂನುಬದ್ಧ ಅಸ್ತಿತ್ವದ ಬಗ್ಗೆ ಮತ್ತೆ ಪ್ರಶ್ನೆ ಎತ್ತಿದ್ದಾರೆ. ಆರ್.ಎಸ್.ಎಸ್ ಭಾರತದಲ್ಲಿ ಅಧಿಕೃತವಾಗಿ ನೋಂದಣಿಯಾಗದ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುನರುಚ್ಚರಿಸಿದ್ದಾರೆ. ಬಿಜೆಪಿ ನಾಯಕರು ಸಂಘಟನೆಯ ಮೇಲೆ ಯಾವುದೇ ಕೇಸ್ ಇಲ್ಲ ಎಂದು ಹೇಳುವುದರ ಹಿಂದಿನ ಕಾರಣವನ್ನು ವಿವರಿಸಿದ ಅವರು, ನೋಂದಣಿ ಸಂಖ್ಯೆ ಮತ್ತು ಅಧಿಕೃತ ವಿಳಾಸವೇ ಇಲ್ಲದ ಕಾರಣ ನೇರವಾಗಿ ಪ್ರಕರಣ ದಾಖಲಾಗುವುದಿಲ್ಲ ಎಂದಿದ್ದಾರೆ. ನೋಂದಣಿಯೇ ಇಲ್ಲದ ಸಂಘಟನೆಯನ್ನು ಕಾನೂನಾತ್ಮಕವಾಗಿ ನಿಷೇಧಿಸುವುದು ಹೇಗೆ ಸಾಧ್ಯ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಮರುಪ್ರಶ್ನೆ ಹಾಕಿದ್ದಾರೆ. ಎಲ್ಲರೂ ಕಾನೂನಿನ ಚೌಕಟ್ಟಿನೊಳಗೆ ಬರಬೇಕು, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರದಲ್ಲಿ ಆರ್ ಎಸ್ ಎಸ್ ಗೆ ಬಹಿರಂಗ ಸವಾಲು ಹಾಕಿರುವ ಸಚಿವರು, ತಕ್ಷಣ ಸಂಘಟನೆಯನ್ನು ನೋಂದಣಿ ಮಾಡಿಸಿಕೊಳ್ಳಿ, ಅದರ ಶುಲ್ಕವನ್ನು ನಾನೇ ಭರಿಸುತ್ತೇನೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿರುವ ಪ್ರತಿ ಶಾಖೆಯ ನೋಂದಣಿ ವೆಚ್ಚವನ್ನು ತಮ್ಮ ಶಾಸಕ ಅನುದಾನ ಅಥವಾ ವೈಯಕ್ತಿಕ ಸಂಬಳದಿಂದ ಕೊಡಲು ಸಿದ್ಧನಿದ್ದೇನೆ, ಅಗತ್ಯವಿದ್ದರೆ ದೇಶಾದ್ಯಂತದ ಶಾಖೆಗಳಿಗೂ ಹಣ ನೀಡುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್ ರಂತಹ ಪ್ರಭಾವಿ ನಾಯಕರು ಸಂಘದ ಸದಸ್ಯರಾಗಿದ್ದರೂ ನೋಂದಣಿಗೆ ಏಕೆ ಹಿಂಜರಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ತಮ್ಮ ಹೇಳಿಕೆಗಳು ಆಧಾರರಹಿತವಾಗಿದ್ದರೆ ಬಿಜೆಪಿ ನಾಯಕರು ಏಕೆ ಚಡಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದು, ತಮ್ಮ ನಿಲುವಿಗೆ ಬದ್ಧನಾಗಿದ್ದು ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಉತ್ತರಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹೇಳಿಕೆ ಕೇವಲ ನೋಂದಣಿ ವಿಚಾರಕ್ಕೆ ಸೀಮಿತವಾಗಿಲ್ಲ, ರಾಜ್ಯದಲ್ಲಿ ಆರ್ ಎಸ್ ಎಸ್ ಕಾರ್ಯಚಟುವಟಿಕೆಗಳ ಮೇಲಿನ ನಿಯಂತ್ರಣ ಮತ್ತು ಪಾರದರ್ಶಕತೆಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ನೋಂದಣಿಯಾಗದ ಸಂಘಟನೆಗೆ ಸರ್ಕಾರಿ ಜಾಗ, ಶಾಲೆಗಳಲ್ಲಿ ಅವಕಾಶ ನೀಡುವ ವಿಚಾರದಲ್ಲಿ ಕಾನೂನು ತೊಡಕುಗಳು ಬರುತ್ತವೆ ಎಂಬುದು ಸರ್ಕಾರದ ವಾದ. ಇನ್ನೊಂದೆಡೆ ಸಂಘ ಸಾಂಸ್ಕೃತಿಕ ಸಂಘಟನೆ, ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಬಿಜೆಪಿ ಸಮರ್ಥನೆ. ಪ್ರಿಯಾಂಕ್ ಖರ್ಗೆ ಅವರ ಶುಲ್ಕ ನಾನೇ ಕಟ್ಟುವೆ ಎಂಬ ಹೇಳಿಕೆ ರಾಜಕೀಯ ವ್ಯಂಗ್ಯದ ಅಸ್ತ್ರವಾಗಿದ್ದು, ಸಂಘವನ್ನು ಕಾನೂನು ಚೌಕಟ್ಟಿಗೆ ತಂದು ಹೊಣೆಗಾರಿಕೆ ಕೇಳುವ ತಂತ್ರವಾಗಿದೆ. ಇದು ಮುಂಬರುವ ದಿನಗಳಲ್ಲಿ ರಾಜ್ಯ-ಕೇಂದ್ರದ ನಡುವೆ ಮತ್ತೊಂದು ಕಾನೂನು ಮತ್ತು ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.