ABHIJNA BHAT: ಯೂಟ್ಯೂಬ್, ಚಾಟ್ ಜಿಪಿಟಿ ನೋಡಿ ವರಮಹಾಲಕ್ಷ್ಮಿ ಪೂಜೆ ಮಾಡಿದ ಅಭಿಜ್ಞಾ

ಯೂಟ್ಯೂಬ್, ಚಾಟ್ ಜಿಪಿಟಿ ನೋಡಿ ವರಮಹಾಲಕ್ಷ್ಮಿ ಪೂಜೆ ಮಾಡಿದ ಅಭಿಜ್ಞಾ

Photo Credits: @abhijna_bhat98 (Instagram)

ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಖ್ಯಾತ ನಟಿ ಅಭಿಜ್ಞಾ ವಿಶ್ವನಾಥ್ ಭಟ್ ಅವರು ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಹಬ್ಬದ ಆಚರಣೆಯ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಭಿಜ್ಞಾ ಅವರ ಕುಟುಂಬದಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಂಪ್ರದಾಯ ಇರಲಿಲ್ಲವಂತೆ. ಆದರೆ ಈ ಬಾರಿ ಅವರು ಮೊದಲ ಬಾರಿಗೆ ಸ್ವತಃ ವರಮಹಾಲಕ್ಷ್ಮಿ ವ್ರತವನ್ನು ನೆರವೇರಿಸಿ ಸೈ ಎನಿಸಿಕೊಂಡಿದ್ದಾರೆ.

ವಿಡಿಯೋದೊಂದಿಗೆ ಭಾವನಾತ್ಮಕ ಕ್ಯಾಪ್ಶನ್ ಬರೆದಿರುವ ನಟಿ, ತಮಗೆ ಈ ಪೂಜಾ ವಿಧಾನ ತಿಳಿದಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಯೂಟ್ಯೂಬ್ ಹಾಗೂ ಚಾಟ್ ಜಿಪಿಟಿ ಸಹಾಯದಿಂದ ಪೂಜೆ

ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನಟಿ, “ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಂಪ್ರದಾಯವಿಲ್ಲ. ಆದರೆ ಈ ವರ್ಷ ನಾನು ಮೊದಲ ಬಾರಿಗೆ ಹಬ್ಬ ಆಚರಿಸಲು ನಿರ್ಧರಿಸಿದೆ” ಎಂದಿದ್ದಾರೆ.

“ಪೂಜೆಯ ಎಲ್ಲಾ ವಿಚಾರಗಳನ್ನು ಯೂಟ್ಯೂಬ್ ಹಾಗೂ ಚಾಟ್ ಜಿಪಿಟಿ ಮೂಲದಿಂದ ತಿಳಿದುಕೊಂಡೆ” ಎಂದು ಅವರು ಕ್ಯಾಪ್ಶನ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊನೆಯಲ್ಲಿ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಆಡಂಬರವಿಲ್ಲದೆ ಕಪ್ಪು ಬಣ್ಣದ ಸರಳ ಸೀರೆಯಲ್ಲಿ ಮಿಂಚಿದ ನಟಿ, ಅಂಗಳ ತೊಳೆದು ರಂಗೋಲಿ ಹಾಕಿ ಲಕ್ಷ್ಮೀ ದೇವಿಯನ್ನು ಅರಶಿನ-ಕುಂಕುಮ, ಹೂವು ಹಾಗೂ ಹಣ್ಣುಗಳಿಂದ ಸುಂದರವಾಗಿ ಅಲಂಕರಿಸಿ ಆರತಿ ಎತ್ತಿದ್ದಾರೆ.

‘ಆಸೆ’ ಧಾರಾವಾಹಿ ಮೂಲಕ ಮನೆಮಾತಾದ ನಟಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಆಸೆ’ ಧಾರಾವಾಹಿಯಲ್ಲಿ ಅಭಿಜ್ಞಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ರೋಹಿಣಿ ಪಾತ್ರದ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಈ ಹಿಂದೆ ‘ಪ್ಯಾಟೆ ಹುಡ್ಗಿಯರ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಅಭಿಜ್ಞಾ, ಹಲವು ಸೀರಿಯಲ್‌ಗಳಲ್ಲಿ ನಟಿಸಿ ತಮ್ಮ ನಟನಾ ಕೌಶಲ್ಯ ಮೆರೆದಿದ್ದಾರೆ.

ಸದ್ಯ ಅಭಿಜ್ಞಾ ಅವರು ಶೇರ್ ಮಾಡಿರುವ ಸರಳ ಹಬ್ಬದ ಆಚರಣೆಯ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.