VIJAYALAKSHMI DAESHAN: ರಕ್ತೇಶ್ವರಿ ಅಂಗಳದಲ್ಲಿ ವಿಜಯಲಕ್ಷ್ಮಿ; ದರ್ಶನ್‌ಗೆ ಸಿಗಲಿದ್ಯಾ ಕರಾವಳಿ ದೈವದ ಶ್ರೀರಕ್ಷೆ?

ರಕ್ತೇಶ್ವರಿ ಅಂಗಳದಲ್ಲಿ ವಿಜಯಲಕ್ಷ್ಮಿ

Photo Credits: @sampaththoogudeepa7999 (Instagram)

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಸುಮ್ಮನೆ ಕುಳಿತಿಲ್ಲ. ಗಂಡನ ಕಷ್ಟ ನಿವಾರಣೆಗಾಗಿ ಅವರು ಕರಾವಳಿಯ ವಿವಿಧ ದೈವಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಪ್ರಸಿದ್ಧ ಮಂದಾರಬೈಲು ಕ್ಷೇತ್ರಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅಲ್ಲಿನ ಕಾರಣಿಕ ಶಕ್ತಿ ರಕ್ತೇಶ್ವರಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿರುವ ಸುದ್ದಿ ಈಗ ಭಾರಿ ವೈರಲ್ ಆಗಿದೆ. ಮಂಗಳೂರಿನ ಕೊಂಚಾಡಿ ದೇರಬೈಲ್‌ನಲ್ಲಿರುವ ಈ ಮಂದಾರಬೈಲು ಕ್ಷೇತ್ರಕ್ಕೆ ಸಾಮಾನ್ಯರಂತೆ ಬಂದ ವಿಜಯಲಕ್ಷ್ಮಿ, ದರ್ಶನ್‌ಗೆ ಒಳಿತಾಗಲೆಂದು ದೈವದ ಬಳಿ ಮಂಡಿಯೂರಿ ಪ್ರಾರ್ಥಿಸಿದ್ದಾರೆ.

ಮಂದಾರಬೈಲು ಕ್ಷೇತ್ರದ ರಕ್ತೇಶ್ವರಿ ದೈವದ ಮಹತ್ವ…

ತುಳುನಾಡಿನ ಆಚಾರ-ವಿಚಾರಗಳಲ್ಲಿ ರಕ್ತೇಶ್ವರಿ ದೈವಕ್ಕೆ ಭಾರಿ ಪ್ರಾಮುಖ್ಯತೆ ಇದೆ. ಮಂದಾರಬೈಲು ಕ್ಷೇತ್ರದಲ್ಲಿ ಪ್ರಧಾನವಾಗಿ ರಕ್ತೇಶ್ವರಿ, ಮಂತ್ರದೇವತೆ ಹಾಗೂ ಗುಳಿಗ ದೈವಗಳನ್ನು ಆರಾಧಿಸಲಾಗುತ್ತದೆ. ಪ್ರಕಾಶ್ ಪಂಡಿತ್ ಎಂಬುವವರ ಮನೆತನವು ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿರುವ ಈ ಕ್ಷೇತ್ರ, ಭಕ್ತರ ಕಷ್ಟಗಳಿಗೆ ತಕ್ಷಣವೇ ದೈವ ದರ್ಶನ ಹಾಗೂ ಪ್ರಶ್ನಾ ಚಿಂತನೆಯ ಮೂಲಕ ಪರಿಹಾರ ನೀಡುತ್ತದೆ ಎಂಬ ಆಳವಾದ ನಂಬಿಕೆಯಿದೆ.

ಮಂತ್ರದೇವತೆ ನೇಮೋತ್ಸವದಲ್ಲಿ ಭಾಗಿಯಾದ ವಿಜಯಲಕ್ಷ್ಮಿ…

ಖಾಸಗಿ ಕಾರ್ಯಕ್ರಮವೊಂದಕ್ಕೆ ಮಂಗಳೂರಿಗೆ ಬಂದಿದ್ದ ವಿಜಯಲಕ್ಷ್ಮಿ, ಈ ಹಿಂದೆ ಸಹ ಮಂದಾರಬೈಲು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಶ್ರಾವಣ ಅಥವಾ ಆಷಾಢದ ನಂತರ ನಡೆದ ದೈವಗಳ ನೇಮೋತ್ಸವದ ವೇಳೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು, ಮಂತ್ರದೇವತೆ ದೈವದ ನರ್ತನ ಸೇವೆಯ ಸಮಯದಲ್ಲಿ ಹಾಜರಿದ್ದರು. ಸುಮಾರು ಅರ್ಧ ಗಂಟೆ ಕಾಲ ಕ್ಷೇತ್ರದಲ್ಲಿ ಉಳಿದುಕೊಂಡು ಪೂಜೆ ಸಲ್ಲಿಸಿ ತೆರಳಿದ್ದಾರೆ.

ದಾಸನಿಗೆ ಸಿಗಲಿದೆಯೇ ರಕ್ತೇಶ್ವರಿ ಅಭಯಹಸ್ತ?

ಕ್ಷೇತ್ರದ ಆಚಾರದಂತೆ ಇಲ್ಲಿ ಫೋಟೋ ಹಾಗೂ ವಿಡಿಯೋ ಮಾಡಲು ಅವಕಾಶವಿಲ್ಲ. ಆದರೂ ವಿಜಯಲಕ್ಷ್ಮಿ ದೈವದ ಬಳಿ ಕಣ್ಣೀರು ಹಾಕುತ್ತಿರುವ ಕ್ಷಣಗಳು ಕರಾವಳಿಯಲ್ಲಿ ಸದ್ದು ಮಾಡುತ್ತಿವೆ. ಕರಾವಳಿಯ ಸಾಲು ಸಾಲು ದೈವಗಳ ದರ್ಶನ ಪಡೆಯುತ್ತಿರುವ ವಿಜಯಲಕ್ಷ್ಮಿ ಅವರ ಪ್ರಾರ್ಥನೆ ಫಲಿಸಲಿದೆಯೇ, ದರ್ಶನ್ ಕಷ್ಟಗಳು ಕಳೆದು ದೈವದ ಅಭಯಹಸ್ತ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.