Photo Credits: @d_exclusive_updates (Instagram)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಡಿ ಗ್ಯಾಂಗ್ ಜೈಲಿನಿಂದ ಹೊರಗೆ ಬರುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ದಿನ ಕಳೆದಂತೆ ಈ ಪ್ರಕರಣ ಮತ್ತಷ್ಟು ಸಂಕೀರ್ಣಗೊಳ್ಳುತ್ತಿದೆ.
ಇತ್ತೀಚೆಗೆ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರೆ, ಇನ್ನೊಂದೆಡೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಖುದ್ದಾಗಿ ಕೋರ್ಟ್‌ಗೆ ಹಾಜರಾಗಲು ದರ್ಶನ್ ಕೇಳಿಕೊಂಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿ ಮಾಡಲು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಮನವಿಯೂ ವಜಾಗೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಅಪ್ಡೇಟ್ ಹೊರಬಿದ್ದಿದೆ.
ಆರೋಪಿ ಪುನೀತ್ ಜೊತೆ ಗೌರವ್ ಹಾಗೂ ಕಿರಣ್ ಲಿಂಕ್…
ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಎನ್ನುವವರ ಹೆಸರು ಮುನ್ನೆಲೆಗೆ ಬಂದಿದೆ. ಆರೋಪಿ ಪುನೀತ್ ಈ ಇಬ್ಬರ ಜೊತೆ ನಿಕಟ ಸಂಪರ್ಕದಲ್ಲಿದ್ದದ್ದು ಎಫ್‌ಎಸ್‌ಎಲ್ (FSL) ತನಿಖೆಯಲ್ಲಿ ಪತ್ತೆಯಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಈ ಆಂಗಲ್‌ನಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಮೊಬೈಲ್ ಆಫ್ ಮಾಡಿ ಎಸ್ಕೇಪ್…
ಪ್ರಕರಣ ದಾಖಲಾದ ದಿನದಿಂದ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಇಬ್ಬರೂ ನಾಪತ್ತೆಯಾಗಿದ್ದಾರೆ. ಪೊಲೀಸರು ನೀಡಿದ ನೋಟಿಸ್ ಕೂಡ ಸ್ವೀಕರಿಸದೆ ಅವರು ತಲೆಮರೆಸಿಕೊಂಡಿದ್ದಾರೆ. ಈ ಹಿಂದೆ ಪುನೀತ್, ವೇಣು ಮತ್ತು ಸುಹಾಸ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪುನೀತ್ ಬಂಧನವಾಗುತ್ತಿದ್ದಂತೆ ವಾಟ್ಸಾಪ್ ಕರೆಯಲ್ಲಿ ಸಂಪರ್ಕದಲ್ಲಿದ್ದ ಇಬ್ಬರು ಗಾಯಬ್ ಆಗಿದ್ದಾರೆ.
ವಿದೇಶಕ್ಕೆ ಹಾರಿದ್ರಾ ಶಂಕೆ: ಪೊಲೀಸರಿಂದ ಹುಡುಕಾಟ…
ಸದ್ಯ ಗೌರವ್ ಹಾಗೂ ಕಿರಣ್ ಇಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಇವರು ವಿದೇಶಕ್ಕೆ ಹಾರಿರಬಹುದು ಎಂಬ ಬಲವಾದ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಗೌರವ್ ಶೆಟ್ಟಿ ಬಂಧನವಾದರೆ ದರ್ಶನ್ ಕೇಸ್‌ನ ಸಾಕ್ಷಿ ಬೆದರಿಕೆ ಜಾಲಕ್ಕೆ ದೊಡ್ಡ ತಿರುವು ಸಿಗುವ ಸಾಧ್ಯತೆಯಿದೆ.




