Photo Credits: @toxic_themovie (Instagram)
ಹೈದರಾಬಾದ್ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಭಾಷಣ ಎಲ್ಲರ ಗಮನ ಸೆಳೆಯುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಾರ್ತ್-ಸೌತ್’ ವಿಭಜನೆಯ ಚರ್ಚೆ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ಭಾಷೆ ಹಾಗೂ ಪ್ರದೇಶಗಳ ಭೇದ ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಯಶ್ ಅವರ ಈ ಮಾತುಗಳು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ. ಅವರ ಮಾಸ್ ಅಷ್ಟೇ ಅಲ್ಲದೆ, ಅವರ ಪ್ರಬುದ್ಧ ಚಿಂತನೆಗೂ ತೆಲುಗು ಪ್ರೇಕ್ಷಕರು ಜೈ ಎಂದಿದ್ದಾರೆ.
ಪ್ರತಿಭೆ ಹಾಗೂ ಪರಿಶ್ರಮಕ್ಕೆ ದೇಶದಲ್ಲಿ ಗಡಿ ಇಲ್ಲ…
ಯಶ್ ತಮ್ಮ ಮಾತಿಗೆ ಬಲ ತುಂಬುತ್ತಾ ಭಾರತದಲ್ಲಿ ಪ್ರತಿಭೆಗೆ ಯಾವುದೇ ಗಡಿ ಇಲ್ಲ ಎಂದಿದ್ದಾರೆ. “ನೀವು ಕಷ್ಟಪಟ್ಟು ಕೆಲಸ ಮಾಡಿದರೆ ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಪ್ರೀತಿ ಸಿಗುತ್ತದೆ. ದೇಶದ ಯಾವುದೇ ಮೂಲೆಯಿಂದ ಬಂದರೂ ಒಳ್ಳೆಯ ಕೆಲಸಕ್ಕೆ ಬೆಂಬಲ ನೀಡುತ್ತೇವೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದ್ದಾರೆ. ಅವರ ಈ ಮಾತುಗಳು ಪ್ರಾದೇಶಿಕ ಭೇದಕ್ಕಿಂತ ಪರಿಶ್ರಮ ದೊಡ್ಡದು ಎಂಬುದನ್ನು ಸಾಬೀತುಪಡಿಸಿವೆ.
ಸ್ಟೀಮ್‌ಬೋಟ್ ಕಥೆ ಹೇಳಿ ಯುವಕರಲ್ಲಿ ಸ್ಫೂರ್ತಿ ತುಂಬಿದ ರಾಕಿ ಭಾಯ್…
ಯುವಕರಿಗೆ ಸ್ಫೂರ್ತಿ ನೀಡಲು ಯಶ್ ಅವರು ಸ್ಟೀಮ್‌ಬೋಟ್‌ನ ಉದಾಹರಣೆ ನೀಡಿದ್ದಾರೆ. ಮೊದಲ ಬಾರಿಗೆ ಸ್ಟೀಮ್‌ಬೋಟ್ ಕಂಡುಹಿಡಿದಾಗ ಅದನ್ನು ಜಗತ್ತು ಅನುಮಾನದಿಂದ ನೋಡಿತ್ತು. ಇದು ಎಂದಿಗೂ ಸಾಧ್ಯವಿಲ್ಲ ಎಂದು ಟೀಕಿಸಿದ್ದರು. ಆದರೆ ಆ ಬೋಟ್ ಯಶಸ್ವಿಯಾಗಿ ಚಲಿಸಿತು. ಚಲಿಸಿದ ನಂತರವೂ ಅದು ಮುಳುಗುತ್ತದೆ ಎಂದೇ ಜನ ಹೇಳುತ್ತಿದ್ದರು ಎಂಬುದನ್ನು ಯಶ್ ನೆನಪಿಸಿಕೊಂಡಿದ್ದಾರೆ.

Photo Credits: @toxic_themovie (Instagram)
ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಗುರಿಯತ್ತ ಮುನ್ನುಗ್ಗಿ…
ಈ ಕಥೆಯ ಮೂಲಕ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡ ಯಶ್, ಯಾವುದೇ ಹೊಸ ಕೆಲಸಕ್ಕೂ ಟೀಕೆಗಳು ಕಡ್ಡಾಯ ಎಂದಿದ್ದಾರೆ. “ಜೀವನದಲ್ಲಿ ನೀವು ಏನನ್ನೇ ಮಾಡಲು ಹೊರಟರೂ ಮಾತನಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಯಾರ ಮಾತನ್ನೂ ಕೇಳದೆ ನಿಮ್ಮ ಗುರಿಯತ್ತ ಸಾಗಿರಿ, ಯಶಸ್ಸು ಖಂಡಿತ ಸಿಗುತ್ತದೆ” ಎಂದು ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ ಯಶ್ ನೀಡಿದ ಸಂದೇಶ…
ದೇಶದ ಜನರು ಒಗ್ಗಟ್ಟಾಗಿರಬೇಕು ಎಂಬ ಯಶ್ ಅವರ ಸಂದೇಶ ಭಾರಿ ಮೆಚ್ಚುಗೆ ಪಡೆದಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರ ವೇದಿಕೆಯಲ್ಲಿ ಕೇವಲ ಸಿನಿಮಾ ವಿಷಯ ಮಾತ್ರವಲ್ಲದೆ, ಯುವಜನತೆಗೆ ನೀಡಿದ ಈ ಮಾರ್ಗದರ್ಶನ ಎಲ್ಲರ ಮನಗೆದ್ದಿದೆ. ಪ್ರಸ್ತುತ ಯಶ್ ಅವರ ಈ ಸ್ಪೂರ್ತಿದಾಯಕ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.




