ಅಭಿಮಾನಿಗಳ ಬಗ್ಗೆ ಯಶ್‌ ತೋರಿದ ಕಾಳಜಿಗೆ ತೆಲುಗು ಫ್ಯಾನ್ಸ್‌ ಫಿದಾ

Yash at Toxic movie event

“ಟಾಕ್ಸಿಕ್ʼ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್‌ ಇವೆಂಟ್‌ ನಿನ್ನೆ (ಆಗಸ್ಟ್‌ 22) ಹೈದರಾಬಾದ್‌ನ ಮಲ್ಲಾ ರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ ಭಾರಿ ಅದ್ಧೂರಿಯಾಗಿ ನಡೆಯಿತು. ನಯನತಾರಾ, ತಾರಾ ಸುತಾರಿಯಾ ಹೊರತುಪಡಿಸಿ ಸಿನಿಮಾದ ಬಹುತೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಯಶ್‌ ಅನ್ನು ನೋಡಲು ಭಾರಿ ಪ್ರಮಾಣದ ಜನ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಯಶ್‌ ಸಹ ಅಭಿಮಾನಿಗಳನ್ನುದ್ದೇಶಿಸಿ ಅದ್ಭುತವಾಗಿ ಮಾತನಾಡಿದರು. ಈ ವೇಳೆ ಯಶ್‌ ಅವರಿಗೆ ಅಭಿಮಾನಿಗಳ ಮೇಲಿರುವ ಕಾಳಜಿ ತೆಲುಗು ಫ್ಯಾನ್ಸ್‌ ಮೆಚ್ಚುಗೆಗೆ ಕಾರಣವಾಯ್ತು.

ಸುಮಾರು ಮೂರು ಗಂಟೆಗೂ ಹೆಚ್ಚು ಸಮಯ ನಡೆದ ಕಾರ್ಯಕ್ರಮದಲ್ಲಿ ಯಶ್‌ ಅವರು ಕೊನೆಯವರಾಗಿ ವೇದಿಕೆ ಏರಿದರು. ಸುಮಾರು 20ಕ್ಕೂ ಹೆಚ್ಚು ನಿಮಿಷ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ಯುವಕರಿಗೆ ಸಾಕಷ್ಟು ಜೀವನ ಪಾಠಗಳನ್ನು ಸಹ ಹೇಳಿದರು. ಸಿನಿಮಾ ಒಂದೇ ಜೀವನ ಅಲ್ಲ, ಸಿನಿಮಾ ಜೀವನ ಪಾಠವೂ ಅಲ್ಲ ಎಂದರು. ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ, ಕನಸು ಕಾಣಿ, ಶ್ರಮ ಪಡಿ ಎಂದರು.

ಮಲ್ಲಾರೆಡ್ಡಿ ಮೈದಾನದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಯಶ್‌ ಮಾತನಾಡುವ ವೇಳೆ ಕೆಲವರು ಸೌಂಡ್‌ ಬಾಕ್ಸ್‌ ಕಟ್ಟಿದ್ದ ಪೋಲುಗಳ ಮೇಲೆ ಹತ್ತಿ ಕೂತಿದ್ದರು. ಈ ವೇಳೆ ಇದ್ದಕ್ಕಿದ್ದಂತ್ತಂತೆ ಸೌಂಡ್‌ ಬಾಕ್ಸ್‌ ಕೆಳಗೆ ಬಿತ್ತು. ಅದರ ಜೊತೆಗೆ ಕೆಲ ಅಭಿಮಾನಿಗಳು ಸಹ ಕೆಳಗೆ ಬಿದ್ದರು. ಭಾಷಣ ಮಾಡುತ್ತಲೇ ಇದನ್ನು ಗಮನಿಸಿದ ಯಶ್‌, ಕೂಡಲೇ ಭಾಷಣ ನಿಲ್ಲಿಸಿದರು. ಏನಾಯ್ತು? ಎಂದು ಕೇಳಿದರು. ತಮ್ಮ ತಂಡದವರನ್ನು ಅಲ್ಲಿಗೆ ಹೋಗಿ ನೋಡುವಂತೆ ಹೇಳಿದರು.

ಇದನ್ನೂ ಓದಿ : ತೆಲುಗು ನೆಲದಲ್ಲಿ ರಾಕಿ ಭಾಯ್ ಮಾಸ್ ಎಂಟ್ರಿ; ಯಶ್ ಭಾಷಣಕ್ಕೆ ಫ್ಯಾನ್ಸ್ ಫಿದಾ

ತಂಡದವರು ಏನಿಲ್ಲ ಎಂದ ಮೇಲೆ ಯಶ್‌ ಮತ್ತೆ ಭಾಷಣ ಶುರು ಮಾಡಿದರು. ಆದರೆ ಆ ಸ್ಥಳದಲ್ಲಿ ಗೊಂದಲದ ವಾತಾವರಣ ಇರುವುದು ಗಮನಿಸಿದ ಯಶ್‌ ಮತ್ತೆ ಭಾಷಣ ನಿಲ್ಲಿಸಿ, ತಮ್ಮ ತಂಡದವರನ್ನು ಪ್ರಶ್ನೆ ಮಾಡಿ ಅಲ್ಲಿ ಏನಾಗಿದೆ? ಯಾರಿಗಾದರೂ ಹಾನಿ ಆಗಿದೆಯೇ ಎಂದು ಖಾತ್ರಿ ಪಡಿಸಿಕೊಂಡು ಭಾಷಣ ಮುಂದುವರೆಸಿದರು. ಯಶ್‌ ಅವರ ಈ ಕಾಳಜಿ ಕಂಡು ಅಭಿಮಾನಿಗಳು ಉಘೆ ಎಂದರು.

ಸೌಂಡ್‌ ಬಾಕ್ಸ್‌ ಬಿದ್ದ ಕಾರಣ ಇಬ್ಬರು ಅಭಿಮಾನಿಗಳಿಗೆ ಗಾಯಗಳಾಗಿವೆ. ಒಬ್ಬ ಯುವತಿ ಸ್ಥಳದಲ್ಲೇ ಪ್ರಜ್ಞೆತಪ್ಪಿದ್ದಳು, ಆದರೆ ಗಾಯಗೊಂಡವರನ್ನು ಪೊಲೀಸರ ನೆರವಿನಿಂದ ಶೀಘ್ರವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಸೌಂಡ್‌ ಬಾಕ್ಸ್‌ ಕುಸಿದಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.