ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಭಿನ್ನಮತದ ಕಿಡಿ ಹೊತ್ತಿಕೊಂಡಿದೆ. ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾದ ಹಲವು ಹಿರಿಯ ನಾಯಕರು ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವಕ್ಕೆ ತಲುಪಿಸಲು ಅಸಂತುಷ್ಟ ನಾಯಕರೆಲ್ಲರೂ ಒಂದೆಡೆ ಸೇರಲು ತೀರ್ಮಾನಿಸಿದ್ದಾರೆ. ಮುಂಬರುವ ವಿಧಾನಮಂಡಲದ ಅಧಿವೇಶನದ ಉದ್ಘಾಟನಾ ದಿನವಾದ ಆಗಸ್ಟ್ 13ರ ಸಂಜೆ ಬೆಂಗಳೂರಿನಲ್ಲಿ ಡಿನ್ನರ್ ಆಯೋಜಿಸಲಾಗಿದ್ದು, ಅಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಚರ್ಚಿಸಲು ಯೋಜನೆ ರೂಪಿಸಲಾಗಿದೆ.
ಈ ಅಸಾಮಧಾನಿತರ ಸಭೆಯ ನೇತೃತ್ವವನ್ನು ಹಿರಿಯ ರಾಜಕಾರಣಿಗಳಾದ ಹೆಚ್.ಕೆ. ಪಾಟೀಲ್ ಹಾಗೂ ಟಿ.ಬಿ. ಜಯಚಂದ್ರ ವಹಿಸಿಕೊಳ್ಳುತ್ತಿದ್ದಾರೆ. ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸುವ ಶಾಸಕರನ್ನು ಒಗ್ಗೂಡಿಸಿ, ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ. ಸಂಪುಟ ಸೇರ್ಪಡೆಯಿಂದ ವಂಚಿತರಾದ ಹಿರಿಯ ನಾಯಕರು ತಮ್ಮ ಸಾಮರ್ಥ್ಯ ಮತ್ತು ಹಿರಿತನವನ್ನು ಕಡೆಗಣಿಸಲಾಗಿದೆ ಎಂಬ ಭಾವನೆಯಲ್ಲಿದ್ದಾರೆ. ಹೀಗಾಗಿ, ಈ ಡಿನ್ನರ್ ಪಾಲಿಟಿಕ್ಸ್ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸುವುದರ ಜೊತೆಗೆ, ನಾಯಕತ್ವದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೊಸ ತಂತ್ರಗಾರಿಕೆಗಳನ್ನು ಹೆಣೆಯಲು ನಿರ್ಧರಿಸಿದ್ದಾರಾ..? ಎಂಬ ವದಂತಿಗಳು ಹರಿದಾಡುತ್ತಿವೆ.
ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಆರಂಭಿಕ ದಿನಗಳಲ್ಲೇ ಇಂತಹ ಭಿನ್ನಮತ ಎದುರಾಗಿರುವುದು ಪಕ್ಷದ ಸ್ಥಿರತೆಗೆ ಸವಾಲಾಗಿ ಪರಿಣಮಿಸಬಹುದು. ಹಿರಿಯ ನಾಯಕರನ್ನು ಸಂಪುಟದಿಂದ ಹೊರಗಿಟ್ಟಿರುವುದು ಕೇವಲ ವೈಯಕ್ತಿಕ ಅಸಮಾಧಾನವಲ್ಲದೆ, ಅವರ ಬೆಂಬಲಿತ ಪ್ರದೇಶಗಳು ಹಾಗೂ ಸಮುದಾಯಗಳಲ್ಲೂ ತೀವ್ರ ನಿರಾಸೆ ಮೂಡಿಸಿದೆ. ಸರ್ಕಾರ ಜನಪ್ರಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದತ್ತ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿ, ಪಕ್ಷದೊಳಗಿನ ಆಂತರಿಕ ಬಂಡಾಯ ಸರ್ಕಾರದ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ಮುಂದಿನ ದಿನಗಳಲ್ಲಿ ಈ ಅಸಮಾಧಾನ ತೀವ್ರಗೊಂಡರೆ, ಹೈಕಮಾಂಡ್ ಮಧ್ಯಪ್ರವೇಶಿಸಿ ಬಂಡಾಯ ಶಮನಗೊಳಿಸುವುದು ಅನಿವಾರ್ಯವಾಗುತ್ತದೆ.




