ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ತಮ್ಮದು ಎನ್ನಲಾದ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಆಡಿಯೋ ತುಣುಕಿನ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಅವರು ಮುಲಾಜಿಲ್ಲದೆ ಹೇಳಿದ್ದಾರೆ. ಆದರೆ, ವರಿಷ್ಠರ ಕುರಿತು ಮಾತನಾಡಿದಂತೆ ಬಿಂಬಿಸಲಾಗಿರುವ ಭಾಗವನ್ನು ತಾಂತ್ರಿಕವಾಗಿ ಮಾರ್ಪಡಿಸಿ, ತಮ್ಮ ವಿರುದ್ಧ ಅಪಪ್ರಚಾರ ಮಾಡಲು ದುರುದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಹಂಚಿಕೊಂಡ ಅವರು, ಸಚಿವ ಸ್ಥಾನ ಲಭಿಸದೆ ಅಸಮಾಧಾನಗೊಂಡಿದ್ದ ಹಿರಿಯ ಮುಖಂಡ ತಿಮ್ಮಾಪುರ ಅವರನ್ನು ಭೇಟಿಯಾಗಲು ತೆರಳಿದ್ದಾಗ ದೂರವಾಣಿ ಸಂಭಾಷಣೆ ನಡೆದಿತ್ತು. ಈ ಮಾತುಕತೆಯ ವೇಳೆ ಸಮಾಜದಲ್ಲಿ ಹರಿದಾಡುತ್ತಿದ್ದ ಸಾಮಾನ್ಯ ಸಂಗತಿಗಳನ್ನು ಪ್ರಸ್ತಾಪಿಸಲಾಯಿತೇ ಹೊರತು, ಪಕ್ಷದ ನಾಯಕರ ಬಗ್ಗೆ ಯಾವುದೇ ಹಗುರವಾದ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಮಾತುಕತೆಯ ಅರ್ಧ ಭಾಗವನ್ನು ಕತ್ತರಿಸಿ, ತಪ್ಪು ಅರ್ಥ ಬರುವಂತೆ ತಿದ್ದಿ ವೈರಲ್ ಮಾಡಲಾದ ಈ ಸಂಚಿನ ವಿರುದ್ಧ ಪೊಲೀಸ್ ದೂರು ದಾಖಲಿಸಿ ನ್ಯಾಯಾಂಗ ಸಮರ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಟೆಕ್ನಿಕಲ್ ಅಪಪ್ರಚಾರ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳ ಸ್ವರೂಪದ ಗಂಭೀರತೆಯನ್ನು ದೃಢಪಡಿಸುತ್ತದೆ. ರಾಜಕಾರಣಿಗಳು ಪರಸ್ಪರ ಮಾತನಾಡುವ ಖಾಸಗಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ, ತಮಗೆ ಬೇಕಾದಂತೆ ಎಡಿಟ್ ಅಥವ AI ಮಾಡಿ ಸಾರ್ವಜನಿಕವಾಗಿ ಹರಿದುಬಡಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪ್ರಮುಖ ನಾಯಕರ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಹೋಗುವ ಮಧ್ಯಸ್ಥಿಕೆದಾರರೇ ಇಂತಹ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಪಕ್ಷದ ಆಂತರಿಕ ಭದ್ರತೆ ಮತ್ತು ಶಿಸ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇಂತಹ ಘಟನೆಗಳು ರಾಜಕೀಯ ಪಕ್ಷಗಳಲ್ಲಿ ಪರಸ್ಪರ ನಂಬಿಕೆಯ ಕೊರತೆಯನ್ನು ಹೆಚ್ಚಿಸುವುದಲ್ಲದೆ, ಸಾರ್ವಜನಿಕರಲ್ಲೂ ಗೊಂದಲ ಮೂಡಿಸುತ್ತವೆ. ಆದ್ರೆ ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಈ ಆರೋಪಗಳಿಂದ ನಂಜಯನಮಠ ಇತರೆ ನಾಯಕರ ರೀತಿ ಸಂಪೂರ್ಣವಾಗಿ ಜಾರಿಕೊಳ್ಳುವ ಪ್ರಯತ್ನ ಮಾಡಿಲ್ಲ, ಬದಲಾಗಿ ತಮ್ಮದೇ ಧ್ವನಿ ಎಂದು ಧೈರ್ಯ ಪ್ರದರ್ಶಿಸಿದ್ದಾರೆ. ಹೀಗಾಗಿ ಹೈಕಮಾಂಡ್ ರ್ ವಿಚಾರದಲ್ಲಿ ಯಾವ ನಿಲುವು ತಾಳಲಿದೆ ಎಂಬುದನ್ನು ಕಾದು ನೋಡಬೇಕಿದೆ.




