ಮಸ್ಕತ್‌ನಲ್ಲಿ ಹುಟ್ಟಿ ಬೆಳೆದ ಸೌಂದರ್ಯಾ ಶೆಟ್ಟಿ: ಬಿಗ್ ಬಾಸ್ ಮನೆಗೆ ಗ್ಲಾಮರಸ್ ಎಂಟ್ರಿ

ಮಸ್ಕತ್ನಲ್ಲಿ ಹುಟ್ಟಿ ಬೆಳೆದ ಸೌಂದರ್ಯಾ ಶೆಟ್ಟಿ

@colorskannadaofficial (Instagram)

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿದೆ. ಈ ಬಾರಿಯ ಸೀಸನ್‌ನಲ್ಲಿ ಗ್ಲಾಮರ್‌ನ ಮೆರುಗು ನೀಡಲು ಬೋಲ್ಡ್ ಚೆಲುವೆ ಸೌಂದರ್ಯಾ ಶೆಟ್ಟಿ ದೊಡ್ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಮೂಲತಃ ಮಂಗಳೂರಿನವರಾದ ಸೌಂದರ್ಯಾ ಶೆಟ್ಟಿ ಜನಿಸಿದ್ದು ಮಸ್ಕತ್‌ನಲ್ಲಿ. ನಂತರ ಮಂಗಳೂರಿನಲ್ಲೇ ಬೆಳೆದು ತಮ್ಮ ಶಿಕ್ಷಣವನ್ನು ಪೂರೈಸಿದರು. ಪ್ರಸ್ತುತ ಮಾಡೆಲಿಂಗ್ ವೃತ್ತಿಯಲ್ಲಿದ್ದು ಮುಂಬೈನಲ್ಲಿ ನೆಲೆಸಿದ್ದಾರೆ.

ತಮ್ಮ ಆಕರ್ಷಕ ಸೌಂದರ್ಯ ಹಾಗೂ ಗ್ಲಾಮರಸ್ ಲುಕ್ ಮೂಲಕವೇ ಇವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತಾರೆ. ಪ್ರಸ್ತುತ ಬಿಗ್ ಬಾಸ್ ಪ್ರವೇಶಿಸಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಸೌಂದರ್ಯಾ ಸಾಧನೆ

ಸೌಂದರ್ಯಾ ಶೆಟ್ಟಿ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ. ಹಲವು ಪ್ರಮುಖ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ಇವರು 2019ರ ‘ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್’ ಕಿರೀಟವನ್ನು ಮುಡಿಗೇರಿಸಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಿದ್ದರು. ಈ ಗೆಲುವು ಅವರ ಮಾಡೆಲಿಂಗ್ ವೃತ್ತಿಗೆ ಹೊಸ ತಿರುವು ನೀಡಿತು.

ಸ್ಪ್ಲಿಟ್ಸ್‌ವಿಲ್ಲಾ 16 ಫೈನಲಿಸ್ಟ್ ಸೌಂದರ್ಯಾ

ಖ್ಯಾತ ರಾಷ್ಟ್ರೀಯ ರಿಯಾಲಿಟಿ ಶೋ ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 16’ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅಂತಿಮ ಹಂತದವರೆಗೆ ತಲುಪಿದ್ದರು. ಅಲ್ಲಿ ತಮ್ಮ ನೇರ ನಡೆ-ನುಡಿಯಿಂದ ಅಪಾರ ಜನಪ್ರಿಯತೆ ಗಳಿಸಿದ್ದರು.

ಶೋನಲ್ಲಿ ಸಹ-ಸ್ಪರ್ಧಿಗಳೊಂದಿಗಿನ ವಾದ-ವಿವಾದಗಳು ಹಾಗೂ ಇವರ ಬೋಲ್ಡ್ ಆಟದ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈ ಶೋ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.

ದೊಡ್ಮನೆಯಲ್ಲಿ ಹೆಚ್ಚಿದ ನಿರೀಕ್ಷೆ

ಸದಾ ಪಾರ್ಟಿ ಮೂಡ್‌ನಲ್ಲಿರುವ ಹುಡುಗಿ ಸೌಂದರ್ಯಾ, ದೊಡ್ಮನೆಯಲ್ಲಿ ತಮ್ಮ ಬೋಲ್ಡ್ ಆಟದಿಂದ ಯಾವ ರೀತಿ ರಂಜಿಸಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಇವರ ಸ್ಪಷ್ಟ ಮಾತು ಹಾಗೂ ನೇರ ವ್ಯಕ್ತಿತ್ವ ಬಿಗ್ ಬಾಸ್ ಮನೆಯ ವಾತಾವರಣಕ್ಕೆ ಮೆರುಗು ತರಲಿದೆ. ಮಂಗಳೂರಿನ ಈ ಚೆಲುವೆ ದೊಡ್ಮನೆಯಲ್ಲಿ ಎಷ್ಟು ದಿನ ಪೈಪೋಟಿ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.