Photo Credits: @shourya_vijay2008 (Instagram)
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಗಲಿ ಬಾರದ ಲೋಕಕ್ಕೆ ಪಯಣಿಸಿ ಇಂದಿಗೆ ಮೂರು ವರ್ಷಗಳು ಕಳೆದಿವೆ. ಕೇವಲ ನೆನಪುಗಳನ್ನು ಮಾತ್ರ ಉಳಿಸಿ ಹೋದ ಅಮ್ಮನನ್ನು ಪುತ್ರ ಶೌರ್ಯ ಪ್ರತಿದಿನವೂ ಮಿಸ್ ಮಾಡಿಕೊಳ್ಳುತ್ತಿದ್ದಾನೆ.
ಸ್ಪಂದನಾ ಅವರ 3ನೇ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಶೌರ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಮ್ಮನೊಂದಿಗಿನ ಬಾಲ್ಯದ ಅಪರೂಪದ ಫೋಟೋಗಳನ್ನು ಶೇರ್ ಮಾಡಿ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶೌರ್ಯ ಹಂಚಿಕೊಂಡಿರುವ ಈ ಎಮೋಷನಲ್ ಪೋಸ್ಟ್ ಸದ್ಯ ವೈರಲ್ ಆಗಿದೆ. ಸಿನಿರಸಿಕರು ಹಾಗೂ ಅಭಿಮಾನಿಗಳು ಸ್ಪಂದನಾ ಅವರ ನೆನಪಿಗೆ ಕಂಬನಿ ಮಿಡಿಯುತ್ತಿದ್ದಾರೆ.
“ನಿನ್ನ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ”: ಸೋಷಿಯಲ್ ಮೀಡಿಯಾದಲ್ಲಿ ಶೌರ್ಯ ಪೋಸ್ಟ್…
ಅಮ್ಮನ ಪೋಟೋಗಳನ್ನು ಶೇರ್ ಮಾಡಿರುವ ಶೌರ್ಯ, “ನೀನಿಲ್ಲದೆ 3 ವರ್ಷಗಳು ಉರುಳಿ ಹೋಗಿವೆ ಅಮ್ಮ” ಎಂದು ಬರೆದುಕೊಂಡಿದ್ದಾನೆ. “ಈಗಲೂ ನಾನು ನಿನ್ನನ್ನು ಪ್ರತಿಕ್ಷಣವೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಮಯ ತುಂಬಾ ವೇಗವಾಗಿ ಓಡುತ್ತಿದೆ” ಎಂದಿದ್ದಾನೆ. “ನೀನು ಯಾವಾಗಲೂ ನನ್ನ ಜೊತೆಯಲ್ಲೇ ಇರುತ್ತೀಯ ಎಂಬ ಸತ್ಯ ನನಗೆ ಗೊತ್ತು. ಐ ಲವ್ ಯೂ ಮಮ್ಮಿ” ಎಂದು ಪ್ರೀತಿ ವ್ಯಕ್ತಪಡಿಸಿದ್ದಾನೆ. “ನಿನ್ನ ಮಗನಾಗಿ ಹುಟ್ಟಿರುವುದಕ್ಕೆ ನನಗೆ ಸದಾ ಹೆಮ್ಮೆ ಇದೆ” ಎಂದು ಮಗ ಶೌರ್ಯ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾನೆ. ಈ ಭಾವುಕ ಪೋಸ್ಟ್ಗೆ ತಂದೆ ವಿಜಯ್ ರಾಘವೇಂದ್ರ ಕೂಡ ಕಾಮೆಂಟ್ ಮಾಡಿ, “ನೀನು ಅಮ್ಮನ ಹೆಮ್ಮೆಯ ಮಗ” ಎಂದು ಧೈರ್ಯ ತುಂಬಿದ್ದಾರೆ. ತಂದೆ-ಮಗನ ಈ ಪ್ರೀತಿಯ ಸಾಲುಗಳು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿವೆ.

Photo Credits: @shourya_vijay2008 (Instagram)
ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಸಂಭವಿಸಿದ ದುರಂತ…
ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಬಿ. ಕೆ. ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ. ಆಗಸ್ಟ್ 7, 2023 ರಂದು ಸ್ನೇಹಿತರೊಂದಿಗೆ ಥೈಲ್ಯಾಂಡ್ ಹಾಗೂ ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಅವರಿಗೆ ಏಕಾಏಕಿ ಲೋ ಬಿಪಿ ಕಾಣಿಸಿಕೊಂಡಿತ್ತು. ತೀವ್ರ ಸ್ವರೂಪದ ಕಾರ್ಡಿಯಾಕ್ ಅರೆಸ್ಟ್ ಹಾಗೂ ಹೃದಯಾಘಾತದಿಂದ ಸ್ಪಂದನಾ ಅವರು ವಿದೇಶದಲ್ಲೇ ಕೊನೆಯುಸಿರೆಳೆದರು. ಅನುಮಾನವೇ ಇರದಂತೆ ಎದುರಾದ ಈ ಅಕಾಲಿಕ ಸಾವು ಇಡೀ ವಿಜಯ್ ರಾಘವೇಂದ್ರ ಕುಟುಂಬವನ್ನು ಕತ್ತಲಲ್ಲಿ ತಳ್ಳಿತ್ತು. ಸ್ಪಂದನಾ ಅವರ ಹಠಾತ್ ಅಗಲಿಕೆ ಸ್ಯಾಂಡಲ್ವುಡ್ ಮತ್ತು ಅಭಿಮಾನಿ ಬಳಗಕ್ಕೆ ತೀವ್ರ ಆಘಾತವನ್ನುಂಟು ಮಾಡಿತ್ತು.
ಸಿನಿಮಾರಂಗ ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿದ್ದ ಸ್ಪಂದನಾ…
ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಸ್ಪಂದನಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ವಿಜಯ್ ರಾಘವೇಂದ್ರ ನಿರ್ದೇಶನದ ‘ಕಿಸ್ಮತ್’ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿಯೂ ಸೈ ಎನಿಸಿಕೊಂಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮ್ಮ ಸಹೋದರ ರಕ್ಷಿತ್ ಶಿವರಾಮ್ ಪರ ಪ್ರಚಾರ ಮಾಡಿದ್ದರು. ಸಮಾಜಸೇವೆ ಹಾಗೂ ಕುಟುಂಬದ ಜವಾಬ್ದಾರಿಯನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸುತ್ತಿದ್ದ ಗುಣ ಅವರದ್ದಾಗಿತ್ತು. ಅಗಲಿ ಮೂರು ವರ್ಷಗಳಾಗಿದ್ದರೂ ಸ್ಪಂದನಾ ಅವರ ಮಂದಹಾಸ ಹಾಗೂ ಸರಳತೆ ಎಲ್ಲರ ಮನದಲ್ಲೂ ಹಸನಾಗಿದೆ. ಶೌರ್ಯ ಅವರ ಪೋಸ್ಟ್ ಮೂಲಕ ಸ್ಪಂದನಾ ಅವರ ಅಪರೂಪದ ನೆನಪುಗಳು ಮತ್ತೆ ಮರುಕಳಿಸಿವೆ.




