DK SHIVAKUMAR: ಒಂದೆಡೆ ಅಸಮಾಧಾನ..ಇನ್ನೊಂದೆಡೆ ಖಾತೆ ಬಿಕ್ಕಟ್ಟು – ಸಂದಿಗ್ಧತೆಯಲ್ಲಿ ಡಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಸಂಪುಟವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿದ್ದು, ಖಾಲಿಯಿದ್ದ ಇಪ್ಪತ್ತು ಸ್ಥಾನಗಳ ಪೈಕಿ 19 ಸ್ಥಾನಗಳನ್ನು ಭರ್ತಿ ಮಾಡಿದೆ. ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆದ ಸುದೀರ್ಘ ಚರ್ಚೆಗಳ ನಂತರ, ಜಾತಿ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದ ಆಂತರಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ನೂತನ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವುದರ ಜೊತೆಗೆ, ಹಿಂದಿನ ಅನುಭವಿ ನಾಯಕರಿಗೂ ಸಚಿವ ಸ್ಥಾನವನ್ನು ಮರುಹಂಚಿಕೆ ಮಾಡಲಾಗಿದೆ.

ಈ ಸಂಪುಟ ಬದಲಾವಣೆಯಲ್ಲಿ ಸಮುದಾಯ, ಪ್ರಾಂತ್ಯ,ಹಿರಿಯರು, ಹೊಸಬರು ಹೀಗೆ ಹಲವು ಮಾನದಂಡಗಳನ್ನು ಗಮದಲ್ಲಿಟ್ಟುಕೊಂಡು
ಪ್ರಾತಿನಿಧ್ಯ ನೀಡಲು ಕೈ ಹೈಕಮಾಂಡ್ ಪ್ರಯತ್ನಿಸಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಪಕ್ಷದೊಳಗೆ ಅಸಮಾಧಾನಗಳು ಹೊಗೆಯಾಡುತ್ತಿವೆ. ಖಾತೆಗಳ ಹಂಚಿಕೆ ಮತ್ತು ಪ್ರಮುಖ ಹುದ್ದೆಗಳ ಹಂಚಿಕೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ಹಿರಿಯ ಶಾಸಕರಲ್ಲಿ ಉಂಟಾಗಿರುವ ತೃಪ್ತಿ-ಅಸಮಾಧಾನಗಳನ್ನು ಶಮನಗೊಳಿಸುವುದು ಪಕ್ಷದ ನಾಯಕತ್ವಕ್ಕೆ ಮುಂದಿರುವ ಸವಾಲಾಗಿದೆ.

ಈ ಸಂಪುಟ ಪುನಾರಚನೆ ಮುಂಬರುವ ಸಾರ್ವತ್ರಿಕ ಮತ್ತು ಸ್ಥಳೀಯ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡ ರಾಜಕೀಯ ತಂತ್ರವಾಗಿದೆ. ಆದ್ರೆ ಇದ್ರಿಂದ ಉಂಟಾಗಿರುವ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಮತ್ತು ವಿವಿಧ ಬಣಗಳನ್ನು ಸಮಾಧಾನಪಡಿಸಲು ಹೈಕಮಾಂಡ್ ಯತ್ನಿಸಿದೆ. ಆದರೆ, ಅನುಭವಿ ನಾಯಕರನ್ನು ಹೊರಗಿಟ್ಟು ಹಠಾತ್ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಶಾಸಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಅಲ್ಲದೆ, ಕೇವಲ ಪ್ರಾದೇಶಿಕ ಮತ್ತು ಜಾತಿ ಸಮೀಕರಣಗಳಿಗೆ ಆದ್ಯತೆ ನೀಡಿ ಖಾತೆಗಳನ್ನು ಹಂಚುವುದಕ್ಕಿಂತ, ಸಚಿವರ ಆಡಳಿತ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಗೆ ಹೆಚ್ಚು ಮಹತ್ವ ನೀಡಿದ್ದರೆ ಸರ್ಕಾರದ ದಕ್ಷತೆ ಹೆಚ್ಚುತ್ತಿತ್ತು. ನೂತನ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಆಡಳಿತ ನಡೆಸಲಿದ್ದಾರೆ ಮತ್ತು ಶಾಸಕರ ಅಸಮಾಧಾನವನ್ನು ಶಮನಗೊಳಿಸಿ ಸರ್ಕಾರ ಸ್ಥಿರವಾಗಿ ಮುನ್ನಡೆಯಲಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.