ANANDA NILAYA SERIAL: ‘ಆನಂದ ನಿಲಯ’ಕ್ಕೆ ಮುಹೂರ್ತ ಫಿಕ್ಸ್: ದಿವ್ಯ ಶ್ರೀಧರ್ ಕಮ್‌ಬ್ಯಾಕ್ ಧಮಾಕ…

'ಆನಂದ ನಿಲಯ' ಶುರು...

ಕನ್ನಡ ಕಿರುತೆರೆ ವೀಕ್ಷಕರಿಗೆ ನಿರಂತರವಾಗಿ ಅತ್ಯುತ್ತಮ ಕೌಟುಂಬಿಕ ಕಥೆಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿ, ಇದೀಗ ಮತ್ತೊಂದು ಹೊಸ ಕೊಡುಗೆಯೊಂದಿಗೆ ಸಜ್ಜಾಗಿದೆ. ಇತ್ತೀಚೆಗೆ ಪ್ರಸಾರ ಆರಂಭಿಸಿರುವ ‘ಜೈಲಲಿತಾ’ ಹಾಗೂ ‘ಮರ್ಯಾದೆ ರಾಮಣ್ಣ’ ಧಾರಾವಾಹಿಗಳು ಸದ್ಯ ವೀಕ್ಷಕರ ಮನ ಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ.

ಇದೇ ಸಾಲಿಗೆ ಈಗ “ಆನಂದ ನಿಲಯ” ಎಂಬ ವಿನೂತನ ಕಥಾಹಂದರ ಹೊಂದಿರುವ ಧಾರಾವಾಹಿ ಸೇರ್ಪಡೆಯಾಗುತ್ತಿದೆ. ಸಂಪೂರ್ಣವಾಗಿ ಕೂಡು ಕುಟುಂಬದ ಪ್ರೀತಿ ಮತ್ತು ಬಾಂಧವ್ಯದ ಸುತ್ತ ಹೆಣೆಯಲಾದ ಈ ಸುಂದರ ಕಥೆಯು, ವೀಕ್ಷಕರ ಮನೆ ಮನಗಳನ್ನು ತಲುಪಲು ಸಿದ್ಧವಾಗಿದೆ.

ಅಂದಹಾಗೆ, ಈ ಕೌಟುಂಬಿಕ ಧಾರಾವಾಹಿಯು ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ಹಾಗೂ ‘ಜಿಯೋ ಹಾಟ್ ಸ್ಟಾರ್’ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ.

ನಾಲ್ಕು ಸಹೋದರರ ಪ್ರೀತಿ ಹಾಗೂ ಅತ್ತಿಗೆಯ ತ್ಯಾಗದ ಕಥೆ…

ಈ ಕಥೆಯು ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿಭಾಯಿಸುವ ನಾಲ್ವರು ಸಹೋದರರ ಸುತ್ತ ಸಾಗುತ್ತದೆ. ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್ ಎಂಬ ಈ ನಾಲ್ಕು ಜನ ಅಣ್ಣ-ತಮ್ಮಂದಿರಲ್ಲಿ ಧರ್ಮ ಮನೆಯ ದೊಡ್ಡ ಮಗ. ತಮ್ಮಂದಿರ ಪಾಲಿಗೆ ಅಣ್ಣನಾಗಿ, ತಂದೆಯಾಗಿ ಹಾಗೂ ಬೆನ್ನೆಲುಬಾಗಿ ನಿಂತು ಅವರ ಖುಷಿಯನ್ನೇ ತನ್ನ ಜೀವ ಅಂದುಕೊಂಡಿರುವ ವ್ಯಕ್ತಿ ಈ ಧರ್ಮ.

ಇನ್ನು ಈ ಮನೆಗೆ ಮಹಾಲಕ್ಷ್ಮಿಯಂತೆ ಬಂದಿರುವ ಧರ್ಮನ ಧರ್ಮಪತ್ನಿಯೇ ಸುಧಾ. ಮೈದುನರನ್ನು ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುವ ಈಕೆ, ಆ ಮನೆಗೆ ಅತ್ತಿಗೆಯಷ್ಟೇ ಅಲ್ಲದೇ ಅಮ್ಮನ ಸ್ಥಾನದಲ್ಲಿದ್ದಾಳೆ. ತಮ್ಮಿಬ್ಬರ ವೈವಾಹಿಕ ಜೀವನಕ್ಕಿಂತಲೂ ಮೈದುನರ ಸಂತೋಷಕ್ಕೆ ಈ ಜೋಡಿ ಮೊದಲ ಆದ್ಯತೆ ನೀಡುತ್ತದೆ.

ಸೊಸೆಯಂದಿರ ಆಗಮನದ ನಂತರ ಬದಲಾಗುವುದೇ ಈ ಕುಟುಂಬದ ಚಿತ್ರಣ?

ಒಗ್ಗಟ್ಟಿನ ಬಲವನ್ನು ಸಾರುವ ಈ ಸುಂದರ ಕುಟುಂಬವನ್ನು ಸುಧಾ ಅತ್ಯಂತ ಜವಾಬ್ದಾರಿಯಿಂದ ಮುನ್ನಡೆಸುತ್ತಿದ್ದಾಳೆ. ಆದರೆ ಮುಂದಿನ ದಿನಗಳಲ್ಲಿ ಈ ಮೂವರು ಮೈದುನರಿಗೆ ಮದುವೆಯಾಗಿ ಹೊಸ ಸೊಸೆಯಂದಿರು ಮನೆಗೆ ಬಂದ ಮೇಲೆ ಏನಾಗಬಹುದು? ಇಷ್ಟು ದಿನ ಒಂದಾಗಿದ್ದ ಈ ಕೂಡು ಕುಟುಂಬದ ಪ್ರೀತಿ ಹಾಗೆಯೇ ಇರುತ್ತದೆಯೇ? ಅಥವಾ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಪ್ರೀತಿಯ ಆನಂದ ನಿಲಯ ಚದುರಿ ಹೋಗುತ್ತದೆಯೇ ಎಂಬುದು ಮುಖ್ಯ ಕಥೆಯಾಗಿದೆ. ಬರಲಿರುವ ಸಾಲು ಸಾಲು ಸವಾಲುಗಳನ್ನು ಸುಧಾ ಹೇಗೆ ಎದುರಿಸುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ. ಪ್ರತಿಯೊಂದು ಕೌಟುಂಬಿಕ ವೀಕ್ಷಕರಿಗೂ ತಕ್ಷಣವೇ ಕನೆಕ್ಟ್ ಆಗುವ ರೀತಿಯಲ್ಲಿ ಸನ್ನಿವೇಶಗಳನ್ನು ರೂಪಿಸಲಾಗಿದೆ.

13 ವರ್ಷಗಳ ಬಳಿಕ ದಿವ್ಯ ಶ್ರೀಧರ್ ಕಮ್‌ಬ್ಯಾಕ್: ಹಿರಿಯ ನಟ-ನಟಿಯರ ಮೆರುಗು…

‘ಆಕಾಶದೀಪ’ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ದಿವ್ಯ ಶ್ರೀಧರ್, 13 ವರ್ಷಗಳ ನಂತರ ಸುಧಾ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅಣ್ಣ ಧರ್ಮನ ಪಾತ್ರದಲ್ಲಿ ಅನುಭವಿ ನಟ ರಾಕೇಶ್ ನಟಿಸುತ್ತಿದ್ದು, ತಮ್ಮಂದಿರಾಗಿ ಕೌಶಿಕ್, ಹರ್ಷ ಮತ್ತು ನಿತೀಶ್ ಅಭಿನಯಿಸುತ್ತಿದ್ದಾರೆ. ಪ್ರಸಿದ್ಧ ನಟಿ ಚಿತ್ಕಲಾ ಬಿರಾದರ್, ಸಿತಾರಾ, ಸಪ್ನ ದೀಕ್ಷಿತ್, ನಯನ ಶೆಟ್ಟಿ, ನಿಶಾ ಹಾಗೂ ರೇಷ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ನೀಲಾ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಮೂರ್ತಿನಾಥ್‌ ನಿರ್ಮಿಸುತ್ತಿದ್ದು, ಆದರ್ಶ್ ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್ 10 ರಿಂದ ರಾತ್ರಿ 7 ಗಂಟೆಗೆ ಶುರುವಾಗಲಿರುವ ಈ ಹೊಸ ಕಥೆಯನ್ನು ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.