ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಪ್ರತ್ಯಕ್ಷ ಸಾಕ್ಷಿ ಪುನೀತ್ ತಮ್ಮ ಹೇಳಿಕೆ ಬದಲಾಯಿಸಿದ್ದು, ಪ್ರಾಸಿಕ್ಯೂಷನ್ ಬಿರುಸಿನ ಕ್ರಾಸ್ ಎಕ್ಸಾಮಿನ್ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಲವು ಅರ್ಜಿ ಸಲ್ಲಿಕೆಯಾಗುತ್ತಿವೆ. ಇತ್ತೀಚೆಗಷ್ಟೇ ಪ್ರದೋಶ್ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡರೂ, ತಂದೆಯ ಪಿತೃಕಾರ್ಯದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಅನುಮತಿ ನೀಡಿತ್ತು.
ಇದೀಗ ನಟ ದರ್ಶನ್ (Darshan) ಅವರಿಗೆ ಮತ್ತೆ ತೀವ್ರ ಬೆನ್ನು ನೋವು ಮರುಕಳಿಸಿದ್ದು, ಸೂಕ್ತ ಚಿಕಿತ್ಸೆ ಹಾಗೂ ಫಿಸಿಯೋಥೆರಪಿ ಕೊಡಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅವರ ಪರ ವಕೀಲರು ಮನವಿ ಸಲ್ಲಿಸಿದ್ದಾರೆ.
ಜೈಲಿನಲ್ಲಿ ಮಲಗಲು ತೊಂದರೆ; ಹೆಚ್ಚಿದ ನೋವು
ಇಂದು (ನವೆಂಬರ್ 05) ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ದರ್ಶನ್ ಕಳೆದ 12 ವರ್ಷಗಳಿಂದ ಬೆನ್ನುಹುರಿಯ L4 ಮತ್ತು L5 ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಕಾರಾಗೃಹದಲ್ಲಿ ಸರಿಯಾದ ಹಾಸಿಗೆ ವ್ಯವಸ್ಥೆಯಿಲ್ಲದೆ ನೆಲದ ಮೇಲೆಯೇ ಮಲಗುತ್ತಿರುವುದರಿಂದ ಅವರ ಬೆನ್ನುನೋವು ಇನ್ನಷ್ಟು ಉಲ್ಬಣಗೊಂಡಿದೆ. ಪ್ರಸ್ತುತ ಅವರು ತೀವ್ರ ನೋವಿನಿಂದ ಬಳಲುತ್ತಿದ್ದು, ನೋವು ನಿವಾರಕ ಸ್ಟಿರಾಯ್ಡ್ ಇಂಜೆಕ್ಷನ್ಗಳನ್ನು ಪಡೆಯುತ್ತಿದ್ದಾರೆ.
ಕಳೆದ ವರ್ಷ ಹಾಗೂ 2024ರಲ್ಲೂ ವೈದ್ಯರು ತಪಾಸಣೆ ನಡೆಸಿ ಫಿಸಿಯೋಥೆರಪಿ ಅಗತ್ಯವಿದೆ ಎಂದು ವರದಿ ನೀಡಿದ್ದರು. ಜೈಲಿನಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಸುಪ್ರೀಂ ಕೋರ್ಟ್ಗೆ ನೀಡಿದ್ದ ಮುಚ್ಚಳಿಕೆಯನ್ನು ಪ್ರಾಸಿಕ್ಯೂಷನ್ ಉಲ್ಲಂಘಿಸಿದೆ ಎಂದು ವಾದಿಸಿದರು.
ಇದನ್ನು ಓದಿ: Darshan Case: ದರ್ಶನ್ ವೈದ್ಯಕೀಯ ಅರ್ಜಿ ಮೇಲೆ ಇಂದು ಕಣ್ಣು; ಸಾಕ್ಷಿ ಪುನೀತ್ ವಿಚಾರಣೆ ನಾಳೆಗೆ ಇಲ್ಲವೇ ಇಂದಾ?
Darshan: ವಿಚಾರಣೆ ನಾಳೆಗೆ ಮುಂದೂಡಿಕೆ
ಈ ಅರ್ಜಿಗೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆ ಹಾಗೂ ವಾದ ಮಂಡಿಸಲು ಪ್ರಾಸಿಕ್ಯೂಷನ್ ವಕೀಲರು ನವೆಂಬರ್ 7ರ ವರೆಗೆ ಕಾಲಾವಕಾಶ ಕೋರಿದರು. ಆದರೆ ದರ್ಶನ್ ಪರ ವಕೀಲರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಂತಿಮವಾಗಿ ಕೋರ್ಟ್ ಅರ್ಜಿಯ ಸುದೀರ್ಘ ವಿಚಾರಣೆಯನ್ನು ನಾಳೆಗೆ (ನವೆಂಬರ್ 06) ಮುಂದೂಡಿದೆ. ನಟನಿಗೆ ಅಗತ್ಯ ಫಿಸಿಯೋಥೆರಪಿ ಮತ್ತು ವೈದ್ಯಕೀಯ ಸೌಲಭ್ಯ ನೀಡಲು ಜೈಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.
ಈ ಹಿಂದೆಯೂ ದರ್ಶನ್ ಅವರಿಗೆ ಬೆನ್ನುನೋವು ಕಾಡಿದಾಗ ಚಿಕಿತ್ಸೆಗಾಗಿ ಜಾಮೀನು ನೀಡಲಾಗಿತ್ತು. ಜೊತೆಗೆ ಜೈಲಿನಲ್ಲಿ ಹಾಸಿಗೆ ಮತ್ತು ದಿಂಬು ನೀಡುವ ಕುರಿತಾಗಿಯೂ ನ್ಯಾಯಾಲಯದಲ್ಲಿ ಭಾರಿ ವಾದ-ಪ್ರತಿವಾದಗಳು ನಡೆದಿದ್ದವು.




