ನವದೆಹಲಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಅದರ ಸಂಘಟಕರು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ವಿದೇಶಿ ಸ್ವಯಂಸೇವಾ ಸಂಸ್ಥೆಗಳು ಹಾಗೂ ಭಾರತ ವಿರೋಧಿ ಜಾಲಗಳಿಂದ ಕಾನೂನುಬಾಹಿರವಾಗಿ ಹಣ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ಪಡೆಯುತ್ತಿದ್ದಾರೆ ಹಾಗೂ ಸಂಘಟನೆಯ ಕಾರ್ಯತಂತ್ರ ನಿರೂಪಕ ಅಶುತೋಷ್ ರಾಂಕಾ ಪಾಕಿಸ್ತಾನದ ರಾಜಕಾರಣಿಗಳಿಂದ ಹಣ ಪಡೆಯುತ್ತಿದ್ದಾರೆ ಎಂಬುದಕ್ಕೆ ತನಿಖಾ ಸಂಸ್ಥೆಗಳಿಗೆ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ಸಚಿವರು ಹೇಳಿದ್ದಾರೆ. ದೇಶದ ಸ್ಥಿರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಹೊರಗಿನಿಂದ ಹಣ ಬರುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ.
ಜಿರಳೆಗಳಿಗೆ ವಿದೇಶಿ ಬೆಂಬಲ ..!
ಈ ವಿವಾದದ ಬೆನ್ನಲ್ಲೇ ಹಬ್ಬದ ಸಂದರ್ಭದಲ್ಲಿ ದೆಹಲಿಯಲ್ಲಿ ಗೊಂದಲ ಸೃಷ್ಟಿಸಲು ಸಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಸಮರ ಸಾರಿದ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಬಿಜೆಪಿ ವಕ್ತಾರ ತುಹಿನ್ ಎ. ಸಿನ್ಹಾ ಆರೋಪಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗವು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ಈ ಆರೋಪಗಳನ್ನು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇಂದ್ರ ಸಚಿವರು ಇಂತಹ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಕೇಂದ್ರದ ಆರೋಪಗಳು ಆಧಾರರಹಿತ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಎಸ್ಐಆರ್ ಚರ್ಚೆಗೆ ಸಂಸತ್ತಿಗೆ ಬನ್ನಿ, ವಿಶೇಷ ಅಧಿವೇಶನಕ್ಕೂ ಸಿದ್ಧ ಎಂದ ಅಮಿತ್ ಶಾ
ಈ ಪ್ರಕರಣ ಈಗ ಕೇವಲ ಹಣಕಾಸಿನ ಆರೋಪವಾಗಿ ಉಳಿದಿಲ್ಲ, ಬದಲಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ. ವಿದೇಶಿ ಹಣದ ವಿಚಾರದಲ್ಲಿ ಸರ್ಕಾರದ ಬಳಿ ನಿಜವಾಗಿಯೂ ಬಲವಾದ ದಾಖಲೆಗಳಿದ್ದರೆ ಅವುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ. ಅದೇ ರೀತಿ ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದ್ದರೆ ಅದು ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಹಬ್ಬದ ಸಮಯದಲ್ಲಿ ನ್ಯಾಯಾಂಗದ ವಿರುದ್ಧದ ಹೇಳಿಕೆಗಳು ಮತ್ತು ಗೊಂದಲದ ವಾತಾವರಣ ಜನರಲ್ಲಿ ಆತಂಕ ಮೂಡಿಸುತ್ತದೆ. ಆದ್ದರಿಂದ ಆರೋಪ-ಪ್ರತ್ಯಾರೋಪಗಳನ್ನು ಮೀರಿ ಪಾರದರ್ಶಕ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಸತ್ಯ ಹೊರಬರುವವರೆಗೂ ಈ ವಿಚಾರ ರಾಜಕೀಯ ವಾಗ್ವಾದಕ್ಕೆ ದೊಡ್ಡ ಅಸ್ತ್ರವಾಗಿಯೇ ಉಳಿಯಲಿದೆ.




